ಡಬ್ಲೂಪಿಎಲ್ ಚೊಚ್ಚಲ ಸೂಪರ್ ಓವರ್ ನಲ್ಲಿ ಆರ್ ಸಿಬಿಗೆ ಆಘಾತ; ಯುಪಿಗೆ ರೋಚಕ ಜಯ!

ಡಬ್ಲೂಪಿಎಲ್ ಇತಿಹಾಸದಲ್ಲೇ ಮೊದಲ ಬಾರಿ ಸೂಪರ್ ಓವರ್ ತಲುಪಿದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲುಂಡರೆ, ಸೋಫಿ ಎಲೆಕ್ ಸ್ಟೋನ್ ಆಲ್ ರೌಂಡ್ ಪ್ರದರ್ಶನದಿಂದ ಯುಪಿ ವಾರಿಯರ್ಸ್ ತಂಡ ರೋಚಕ ಗೆಲುವು ಸಾಧಿಸಿತು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ಶತಕ ವಂಚಿತೆ ಎಲ್ಸಿ ಪೆರ್ರಿ ಮತ್ತು ಡ್ಯಾನಿ ವ್ಯಾಟ್ ಹಾಡ್ಜ್ ಅವರ ಅರ್ಧಶತಕಗಳ ನೆರವಿನಿಂದ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 180 ರನ್ ಕಲೆ ಹಾಕಿತು. ಕಠಿಣ ಗುರಿ ಬೆಂಬತ್ತಿದ ಯುಪಿ ವಾರಿಯರ್ಸ್ 20 ಓವರ್ ಗಳಲ್ಲಿ 180 ರನ್ ಗೆ ಆಲೌಟಾಯಿತು.

ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ 1 ವಿಕೆಟ್ ಕಳೆದುಕೊಂಡು 8 ರನ್ ಗಳಿಸಿತು. ಬ್ಯಾಟಿಂಗ್ ನಲ್ಲಿ ಮಿಂಚಿದ ಎಲೆಕ್ ಸ್ಟೋನ್ ಬೌಲಿಂಗ್ ಮಾಡುವ ಮೂಲಕ ಆರ್ ಸಿಬಿಗೆ ಕೇವಲ 4 ರನ್ ಬಿಟ್ಟುಕೊಡುವ ಮೂಲಕ ಗೆಲುವಿನಲ್ಲಿ ಮಿಂಚಿದರು.

ಯುಪಿ ವಾರಿಯರ್ಸ್ ತಂಡ 161 ರನ್ ಗೆ 9 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಈ ಹಂತದಲ್ಲಿ ಅಖಾಡಕ್ಕೆ ಇಳಿದ ಸೋಫಿ ಎಲೆಕ್ ಸ್ಟೋನ್ 19 ಎಸೆತಗಳಲ್ಲಿ 1 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 33 ರನ್ ಚಚ್ಚಿದರು. ಕೊನೆಯ ಎಸೆತದಲ್ಲಿ ಎಲೆಕ್ ಸ್ಟೋನ್ ಔಟಾಗಿದ್ದರಿಂದ ಪಂದ್ಯ ರೋಚಕ ಸೂಪರ್ ಓವರ್ ತಲುಪಿತು. ಕಳೆದ ಮೂರು ಆವೃತ್ತಿಗಳಲ್ಲಿ ಸೂಪರ್ ಓವರ್ ತಲುಪಿದ ಮೊದಲ ಪಂದ್ಯ ಇದಾಗಿದೆ.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆರ್ ಸಿಬಿ ತಂಡ ನಾಯಕಿ ಸ್ಮೃತಿ ಮಂದಾನ (0) ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ಎಲ್ಸಿ ಪೆರ್ರಿ ಮತ್ತು ಡ್ಯಾನಿ ವ್ಯಾಟ್ ಹಾಡ್ಜ್ ಎರಡನೇ ವಿಕೆಟ್ ಗೆ 95 ರನ್ ಜೊತೆಯಾಟದಿಂದ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು.

ಎಲ್ಸಿ ಪೆರ್ರಿ 56 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 90 ರನ್ ಗಳಿಸಿ ಅಜೇಯರಾಗಿ ಉಳಿದರೆ, ಡ್ಯಾನಿ ವೆಟ್ 41 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 57 ರನ್ ಗಳಿಸಿದರು. ನಂತರ ಬಂದ ಆಟಗಾರ್ತಿಯರು ವಿಫಲರಾಗಿದ್ದರಿಂದ ತಂಡ 200ರ ಗಡಿ ತಲುಪುವ ಅವಕಾಶ ಕಳೆದುಕೊಂಡಿತು.

Post a Comment

Previous Post Next Post