ಪ್ರೀತಿಸುವ ನಾಟಕವಾಗಿ ನೆರೆಮನೆಯಾತ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ನ್ಯಾಯ ಕೊಡಿಸಬೇಕಾದ ಪೊಲೀಸ್ ಪೇದೆಯೇ ಆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಬೊಮ್ಮನಹಳ್ಳಿ ಠಾಣೆಯ ಕಾನ್ ಸ್ಟೇಬಲ್ ಅರುಣ್ ಈ ಕೃತ್ಯ ಎಸಗಿದ್ದು, ಪೊಲೀಸ್ ಪೇದೆ ಹಾಗೂ ವಿಕ್ಕಿ ಎಂಬುವವರನ್ನು ಪೊಲೀಸರು ಪೋಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ.
ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ತಾಯಿ ಜೊತೆ ವಾಸವಿದ್ದ 17 ವರ್ಷದ ಸಂತ್ರಸ್ತೆಗೆ ನೆರೆಮನೆಯ ವಿವಾಹಿತ ವಿಕ್ಕಿ ಪರಿಚಯವಾಗಿದೆ. ಮದುವೆ ಆಗುವುದಾಗಿ ನಂಬಿಸಿ ಆಕೆಯನ್ನು ವಂಚಿಸಿ ಅತ್ಯಾಚಾರ ಎಸಗಿದ್ದಾನೆ. ಇದರಿಂದ ನೊಂದ ಬಾಲಕಿ ತಾಯಿಯ ಬಳಿ ಘಟನೆಯನ್ನು ಹೇಳಿದ್ದಾಳೆ.
ತಾಯಿ ಮತ್ತು ಮಗಳು ಬೊಮ್ಮನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ದೂರು ನೀಡಲು ಬಂದಿದ್ದ ಸಂತ್ರಸ್ತೆ ಬಾಲಕಿಗೆ ನ್ಯಾಯ ಕೊಡಿಸುತ್ತೇನೆ ಅಲ್ಲದೇ ಕೆಲಸ ಕೊಡಿಸುವುದಾಗಿ ಪೊಲೀಸ್ ಪೇದೆ ಅರುಣ್ ನಂಬಿಸಿದ್ದಾನೆ.
ಕಳೆದ ಡಿಸೆಂಬರ್ ನಲ್ಲಿ ಬಿಟಿಎಂ ಲೇಔಟ್ ಲಾಡ್ಜ್ ಗೆ ಅಪ್ರಾಪ್ತೆ ಕರೆಯಿಸಿಕೊಂಡಿದ್ದ ಅರುಣ್ ಮದ್ಯದ ಬಾಟಲಿಯಲ್ಲಿ ಮತ್ತು ಬರುವ ಔಷಧಿ ಬೆರೆಸಿ ಕುಡಿಸಿ ಆಕೆ ಮೇಲೆ ಆತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಖಾಸಗಿ ವಿಡಿಯೊಗಳಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.
ಪೇದೆ ಕೆಲಸ ಮಾಡುತ್ತಿದ್ದ ಬೊಮ್ಮನಹಳ್ಳಿ ಠಾಣೆಯಲ್ಲಿ ದೂರು ಸ್ವೀಕರಿಸದ ಕಾರಣ ಸಂತ್ರಸ್ತೆ ಮತ್ತು ತಾಯಿ ನಗರ ಪೋಲಿಸ್ ಆಯುಕ್ತರ ಬಳಿ ಆಕೆ ಪೋಷಕರು ಹೋಗಿದ್ದಾರೆ. ಬಳಿಕ ಕಮಿಷನರ್ ಸಹ ದೂರು ದಾಖಲಿಸಿಕೊಂಡು ತನಿಖೆ ಮಾಡಿ ಕಾನೂನು ರೀತಿಯಲ್ಲಿ ಕ್ರಮ ವಹಿಸಲು ಆದೇಶಿಸಿದ್ದಾರೆ.
ಮೈಕೊ ಲೇಔಟ್ ಠಾಣೆಯಲ್ಲಿ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕೃತ್ಯ ನಡೆದ ಸ್ಥಳ ಆಧರಿಸಿ ಬೊಮ್ಮನಹಳ್ಳಿ ಪೊಲೀಸರಿಗೆ ಪ್ರಕರಣವನ್ನ ವರ್ಗಾಯಿಸಿದ್ದರು. ಈ ಸಂಬಂಧ ತನಿಖೆ ನಡೆಸಿ ಇಬ್ಬರನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ.