ಬೆಂಗಳೂರಿನ ರಚಿನ್ ರವೀಂದ್ರ ಸಿಡಿಸಿದ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ 5 ವಿಕೆಟ್ ಗಳಿಂದ ಜಯ ಸಾಧಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಜೊತೆ ಸೆಮಿಫೈನಲ್ ಗೆ ಲಗ್ಗೆ ಹಾಕಿದರೆ, ಹಾಲಿ ಚಾಂಪಿಯನ್ ಹಾಗೂ ಆತಿಥೇಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಹೊರಬಿದ್ದವು.
ರಾವಲ್ಪಿಂಡಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡವನ್ನು 9 ವಿಕೆಟ್ ಗೆ 239 ರನ್ ಗಳಿಗೆ ಕಟ್ಟಿ ಹಾಕಿದ ನ್ಯೂಜಿಲೆಂಡ್ ತಂಡ 46.1 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಈ ಮೂಲಕ ನ್ಯೂಜಿಲೆಂಡ್ ಎ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡರೆ, ಭಾರತ ಎರಡನೇ ಸ್ಥಾನ ಗಳಿಸಿತು. ಈ ಎರಡೂ ತಂಡಗಳು ಲೀಗ್ ನ ಕೊನೆಯ ಪಂದ್ಯದಲ್ಲಿ ಮುಖಾಮುಖಿ ಆಗಲಿದ್ದು, ಈ ಪಂದ್ಯದ ವಿಜೇತರು ಅಗ್ರಸ್ಥಾನಕ್ಕೇರಲಿದ್ದಾರೆ.
ಆತಿಥೇಯ ಪಾಕಿಸ್ತಾನ ತಂಡ ಕೊನೆಯ ಸ್ಥಾನಕ್ಕೆ ಕುಸಿದು ಸೆಮಿಫೈನಲ್ ರೇಸ್ ನಿಂದ ಹೊರಬಿದ್ದರೆ, ಬಾಂಗ್ಲಾದೇಶ ಮೂರನೇ ಸ್ಥಾನಿಯಾಗಿ ಹೊರಬಿದ್ದಿತು. ಈ ಪಂದ್ಯದಲ್ಲಿ ಬಾಂಗ್ಲಾದೇಶ ಗೆದ್ದಿದ್ದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ಸೆಮಿಫೈನಲ್ ಆಸೆ ಜೀವಂತವಾಗಿ ಉಳಿಸಿಕೊಳ್ಳುವ ಅವಕಾಶ ಇತ್ತು.
ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ ಮೈಕಲ್ ಬ್ರಾಸ್ ವೆಲ್ (26/4) ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ಬೃಹತ್ ಮೊತ್ತ ದಾಖಲಿಸುವ ಅವಕಾಶದಿಂದ ವಂಚಿತವಾಯಿತು. ಬಾಂಗ್ಲಾ ಪರ ನಾಯಕ ನಜ್ಮುಲ್ಲಾ ಹುಸೇನ್ ಶ್ಯಾಂಟೊ (77) ಮತ್ತು ಜಾಕರ್ ಅಲಿ (41) ರಶೀದ್ ಹುಸೇನ್ (26) ಮಾತ್ರ ಹೋರಾಟ ನಡೆಸಿದರು.
ಸುಲಭ ಗುರಿ ಬೆಂಬತ್ತಿದ ನ್ಯೂಜಿಲೆಂಡ್ ತಂಡ 15 ರನ್ ಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ರಚಿನ್ ರವಿಚಂದ್ರ 105 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 112 ರನ್ ಬಾರಿಸಿ ಗೆಲುವಿನ ರೂವಾರಿ ಆದರು. ರಚಿನ್ ಗೆ ಉತ್ತಮ ಬೆಂಬಲ ನೀಡಿದ ಟಾಮ್ ಲಾಥಮ್ (55) ಅರ್ಧಶತಕ ಗಳಿಸಿದರು.