ಭಾರತಕ್ಕೆ ಮರಳಿದ ಅಮೆರಿಕದ 3ನೇ ವಿಮಾನ: 335ಕ್ಕೇರಿದ ಗಡಿಪಾರು ಸಂಖ್ಯೆ

ಭಾರತದ 112 ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕದ ಮೂರನೇ ವಿಮಾನ ಭಾನುವಾರ ರಾತ್ರಿ ಪಂಜಾಬ್ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ಶನಿವಾರ ಎರಡನೇ ವಿಮಾನದಲ್ಲಿ 119 ಅಕ್ರಮ ವಲಸಿಗರನ್ನು ಕರೆತಂದಿದ ಅಮೆರಿಕದ ವಿಮಾನ ಭಾನುವಾರ ರಾತ್ರಿ 10.10ರ ಸುಮಾರಿಗೆ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಈ ಮೂಲಕ ಭಾರತಕ್ಕೆ ಗಡಿಪಾರು ಮಾಡಲಾದ ಭಾರತೀಯರ ಸಂಖ್ಯೆ 335ಕ್ಕೆ ಏರಿಕೆಯಾದಂತಾಗಿದೆ.

ಈ ಬಾರಿ ಬಂದಿಳಿದ ಸಿಎಸ್-7 ವಿಮಾನದಲ್ಲಿ ಪಂಜಾಬ್ ನ 31, ಹರಿಯಾಣದ 44, ಗುಜರಾತ್ ನ 33, ಉತ್ತರ ಪ್ರದೇಶದ ಇಬ್ಬರು, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ ನ ತಲಾ ಒಬ್ಬರು ಇದ್ದರು ಎಂದು ಹೇಳಲಾಗಿದೆ. ಅಕ್ರಮ ವಲಸಿಗರನ್ನು ಕರೆತರಲು ವಿಮಾನ ನಿಲ್ದಾಣಕ್ಕೆ ಕೆಲವು ಕುಟುಂಬಗಳು ಆಗಮಿಸಿದ್ದವು.

ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅಮೆರಿಕಕ್ಕೆ ಅಕ್ರಮವಾಗಿ ನುಸುಳಿದವರನ್ನು ಹೊರಹಾಕುವ ಕಾರ್ಯಕ್ರಮ ಆರಂಭವಾಗಿದ್ದು, ವಿವಿಧ ದೇಶಗಳ ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸುವ ಕೆಲಸ ಭರದಿಂದ ಸಾಗಿದೆ.

ಮೊದಲ ಕಂತಿನಲ್ಲಿ ಭಾರತದ 102 ಮಂದಿ ಅಕ್ರಮ ವಲಸಿಗರನ್ನು ಕಳುಹಿಸಿಕೊಡಲಾಗಿತ್ತು. ಶನಿವಾರ ಎರಡನೇ ವಿಮಾನದಲ್ಲಿ 119 ಮಂದಿ ಬಂದಿಳಿದಿದ್ದರೆ ಇದೀಗ ಮೂರನೇ ವಿಮಾನದಲ್ಲಿ 112 ಮಂದಿಯನ್ನು ಕರೆ ತರಲಾಗಿದೆ. ಅಮೆರಿಕದಲ್ಲಿ ಭಾರತೀಯ ಅಕ್ರಮ ವಲಸಿಗರ ಸಂಖ್ಯೆ 487 ಇದೆ ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿತ್ತು.

ಭಾರತಕ್ಕೆ ಮರಳಿದ ಕೊಲೆ ಆರೋಪಿಗಳು!

ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಅಕ್ರಮ ವಲಸೆ ತಡೆ ನಿಲುವಿನಿಂದ ಇಬ್ಬರು ಕೊಲೆ ಆರೋಪಿಗಳು ಭಾರತಕ್ಕೆ ಸಿಗುವಂತಾಗಿದೆ.

ಅಮೆರಿಕದಿಂದ ಗಡಿಪಾರಾದ ಇಬ್ಬರು ಯುವಕರನ್ನು ರಾಜ್ಪುರದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಸಂದೀಪ್ ಸಿಂಗ್ ಅಲಿಯಾಸ್ ಸನ್ನಿ ಮತ್ತು ಪ್ರದೀಪ್ ಸಿಂಗ್ ಎಂದು ಗುರುತಿಸಲಾಗಿದೆ.

ಶನಿವಾರ (ಫೆ.15) ರಾತ್ರಿ ಅಮೃತಸರ ವಿಮಾನ ನಿಲ್ದಾಣದಲ್ಲಿ ಅ-17 ವಿಮಾನ ಬಂದಿಳಿದಿತ್ತು. ಈ ವಿಮಾನದಲ್ಲಿದ್ದ 116 ಜನರಲ್ಲಿ ಪಟಿಯಾಲ ಜಿಲ್ಲೆಯ ರಾಜ್ಪುರದ ಇಬ್ಬರು ಯುವಕರನ್ನು ಬಂಧಿಸಲಾಗಿದೆ.

ಇವರಿಬ್ಬರೂ 2023ರಲ್ಲಿ ದಾಖಲಾದ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದರು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನಾನಕ್ ಸಿಂಗ್ ಖಚಿತಪಡಿಸಿದ್ದಾರೆ. ಸಂದೀಪ್ ಮತ್ತು ಇತರ ನಾಲ್ವರ ವಿರುದ್ಧ ಎರಡುದ ವರ್ಷದ ಹಿಂದೆ ರಾಜ್ಪುರದಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಸಂದೀಪ್ನ ಮತ್ತೊಬ್ಬ ಸಹಚರ ಪ್ರದೀಪ್ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗಿತ್ತು.

ಇಬ್ಬರು ಆರೋಪಿಗಳನ್ನು ಬಂಧಿಸಲು ರಾಜ್ಪುರ ಪೊಲೀಸ್ ಠಾಣೆಯ ವಿಶೇಷ ತಂಡವನ್ನು ಶನಿವಾರ ಅಮೃತಸರ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗಿತ್ತು.

65 ಮಂದಿ ಪಂಜಾಬ್ ಮೂಲದವರೂ ಸೇರಿದಂತೆ 116 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನ ಶನಿವಾರ ರಾತ್ರಿ 11,35ಕ್ಕೆ ಅಮೃತಸರಕ್ಕೆ ಬಂದಿಳಿದಿತ್ತು.  ಪೊಲೀಸ್ ಅಧಿಕಾರಿಗಳಿಗೆ ಗಡಿಪಾರು ವಿಮಾನದಲ್ಲಿ ಈ ಆರೋಪಿಗಳು ಬರುವ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿತ್ತು. ಆರೋಪಿಗಳು ವಿಮಾನದಿಂದ ಇಳಿದು ಹೊರ ಬರುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ.

ಬಂಧನ ಕಾರ್ಯಾಚರಣೆ ನಡೆಸಲು ವಿಮಾನ ನಿಲ್ದಾಣದ ಆವರಣದಲ್ಲಿ ಕಟ್ಟುನಿಟ್ಟಿನ ಜಾಗರೂಕತೆ ವಹಿಸಿತ್ತು. ಆರೋಪಿಗಳು ಬಂದ ತಕ್ಷಣ ಅವರನ್ನು ವಶಕ್ಕೆ ಪಡೆಯಲಾಯಿತು. ಇಬ್ಬರು ಆರೋಪಿಗಳ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

Post a Comment

Previous Post Next Post