WPL: ಸ್ಮೃತಿ ಮಂದಾನ ಮಿಂಚಿನಾಟ: ಡೆಲ್ಲಿ ವಿರುದ್ಧ ಆರ್ ಸಿಬಿಗೆ 8 ವಿಕೆಟ್ ಜಯ

ನಾಯಕಿ ಸ್ಮೃತಿ ಮಂದಾನ ಸಿಡಿಸಿದ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಗಳ ಭಾರೀ ಅಂತರದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಮಹಿಳಾ ಪ್ರೀಮಿಯರ್ ಲೀಗ್ ಟಿ-20 ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ.

ವಡೋದರಾದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 19.3 ಓವರ್ ಗಳಲ್ಲಿ 141 ರನ್ ಗಳಿಗೆ ಆಲೌಟ್ ಮಾಡಿದ ಆರ್ ಸಿಬಿ ತಂಡ 16.2 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಈ ಮೂಲಕ ಟೂರ್ನಿಯಲ್ಲಿ ಅಗ್ರಸ್ಥಾನಕ್ಕೇರಿತು.

ಆರ್ ಸಿಬಿ ತಂಡಕ್ಕೆ ನಾಯಕಿ ಸ್ಮೃತಿ ಮಂದಾನ ಮತ್ತು ಡ್ಯಾನಿ ವೇಟ್-ಹಾಡ್ಜ್ ಮೊದಲ ವಿಕೆಟ್ ಗೆ 107 ರನ್ ಪೇರಿಸುವ ಮೂಲಕ ದಾಖಲೆ ಜೊತೆಯಾಟದಿಂದ ತಂಡದ ಗೆಲುವು ಖಚಿತಪಡಿಸಿದರು. ಡ್ಯಾನಿ ವೇಟ್ 33 ಎಸೆತಗಳಲ್ಲಿ 7 ಬೌಂಡರಿಯೊಂದಿಗೆ 42 ರನ್ ಬಾರಿಸಿ 8 ರನ್ ಗಳಿಂದ ಅರ್ಧಶತಕ ವಂಚಿತರಾದರು.

ಮೊದಲ ಪಂದ್ಯದಲ್ಲಿ ವಿಫಲರಾಗಿದ್ದ ಸ್ಮೃತಿ ಮಂದಾನ ಈ ಪಂದ್ಯದಲ್ಲಿ ಮಿಂಚಿನಾಟದಿಂದ ಆಕರ್ಷಣೆಯ ಕೇಂದ್ರಬಿಂದುವಾದರು. ಸ್ಮೃತಿ ಮಂದಾನ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಂತಿಮವಾಗಿ 47 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 81 ರನ್ ಬಾರಿಸಿದ್ದಾಗ ಶಿಖಾ ಪಾಂಡೆ ಎಸೆತದಲ್ಲಿ ರಿವರ್ಸ್ ಸ್ವೀಪ್ ಮಾಡುವ ಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು. ಮೊದಲ ಪಂದ್ಯದಲ್ಲಿ ಮಿಂಚಿದ್ದ ರೀಚಾ ಘೋಷ್ ಸಿಕ್ಸರ್ ಬಾರಿಸುವ ಮೂಲಕ ತಂಡದ ಗೆಲುವನ್ನು ಭರ್ಜರಿಯಾಗಿ ಸಂಭ್ರಮಿಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರೇಣುಕಾ ಸಿಂಗ್ ಮತ್ತು ಜಾರ್ಜಿಯಾ ತಲಾ 3 ವಿಕೆಟ್ ಪಡೆದು ಕಟ್ಟಿಹಾಕಿದರು. ಕಿಮ್ ಗರ್ಥ್ ಮತ್ತು ಎಕ್ತಾ ಬಿಸ್ಟ್ ತಲಾ 2 ವಿಕೆಟ್ ಪಡೆದು ಉತ್ತಮ ಬೆಂಬಲ ನೀಡಿದರು. ಡೆಲ್ಲಿ ಪರ ಜೆಮಿಹಾ ರೋಡ್ರಿಗಜ್ (34) , ಸಾರಾಹ್ ಬ್ರೇಸ್ (23) ಮತ್ತು ಅನ್ನಬೇಲ್ ಸದರ್ಲೆಂಡ್ (19) ಸ್ವಲ್ಪಮಟ್ಟಿಗೆ ಪ್ರತಿರೋಧ ಒಡ್ಡಿದರು.

Post a Comment

Previous Post Next Post