ಮುಂದಿನ ಬಾರಿ ನನ್ನ ನಾಯಕತ್ವದಲ್ಲೇ ಚುನಾವಣೆ: ಡಿಕೆ ಶಿವಕುಮಾರ್ ಹೊಸ ಬಾಂಬ್

ಮುಂದಿನ ಬಾರಿ ನನ್ನ ನಾಯಕತ್ವದಲ್ಲೇ ಚುನಾವಣೆ ನಡೆಯಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಇದೀಗ ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಬಾರಿ ನನ್ನ ನಾಯಕತ್ವದಲ್ಲೇ ಚುನಾವಣೆ ನಡೆದಾಗ ಈ ಘೋಷಣೆ ಕೂಗಿ ಎಂದು ಡಿಕೆ, ಡಿಕೆ ಎಂದು ಸಭೆಯಲ್ಲಿ ಘೋಷಣೆ ಕೂಗಿದವರಿಗೆ ಸಲಹೆ ನೀಡಿದರು.
ನಾನಿನ್ನು ಗಟ್ಟಿಯಾಗಿ ಇದ್ದೇನೆ. ಇನ್ನು 8-10 ವರ್ಷ ವಿಧಾನಸೌಧದಲ್ಲಿ ಇರುತ್ತೇನೆ. ನಂಬಿಕೆಯೇ ಮುಖ್ಯ. ನಂಬಿಕೆಯಿಂದಲೇ ನಾನು ಇಲ್ಲಿಯವರೆಗೂ ಬಂದಿದ್ದೇನೆ. ನಾನು ನಿಮ್ಮನ್ನು ಸುಮ್ಮನೆ ಮದುವೆ ಆಗಿಲ್ಲ ಎಂದರು.

ಸರ್ಕಾರದ ರಥ ಎಳೆಯುವವರು ಸರ್ಕಾರಿ ನೌಕರರು. ನೀವು ಇಲ್ಲದಿದ್ದರೆ ಸರ್ಕಾರದ ಚಕ್ರ ಮುಂದಕ್ಕೆ ಸಾಗುವುದಿಲ್ಲ. ನಿಮ್ಮ ಸಂಘ ರಚನಾತ್ಮಕವಾಗಿ ಕೆಲಸ ಮಾಡುತ್ತಿದೆ. ಸರ್ಕಾರಿ ಕೆಲಸ ಕೇವಲ ಹುದ್ದೆಯಲ್ಲ. ಅದೊಂದು ಜವಾಬ್ದಾರಿ. ನೀವು ಹೃದಯ ಶ್ರೀಮಂತಿಕೆಯಿಂದ ಜವಾಬ್ದಾರಿ ಸರಿಯಾಗಿ ನಿಭಾಯಿಸಬೇಕು” ಎಂದರು.

ನಾನು 1989ರಿಂದ ವಿಧಾನಸಭೆಯಲ್ಲಿ ಇದ್ದೇನೆ. ಕಾರ್ಯಾಂಗದ ಭಾಗವಾಗಿ ಸರ್ಕಾರಿ ನೌಕರರು ನೀವೀದ್ದೀರಿ. ನಿಮ್ಮ ಜವಾಬ್ದಾರಿ ನನಗೆ ಅರಿವಿದೆ. ನಾವು ದೇವಾಲಯಕ್ಕೆ ಹೋದಾಗ ದೇವರ ಬಳಿ ಏನು ಮಾತನಾಡಬೇಕು ತಿಳಿಯದೇ ಇದ್ದಾಗ ನಮ್ಮ ಮಧ್ಯೆ ಮಾತುಕತೆ ನಡೆಸಲು ಅರ್ಚಕರು ಸಹಾಯ ಮಾಡುತ್ತಾರೆ. “ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರಃ” ಅಂದರೆ ಅರ್ಚಕರ ಪ್ರಭಾವದಿಂದ ನಾವು ಶಿಲೆಯಲ್ಲೂ ಶಂಕರನನ್ನು ಕಾಣಬಹುದು ಎಂದು ಅರ್ಥ. ಪ್ರಜಾಪ್ರಭುತ್ವ, ಸಂವಿಧಾನದ ವ್ಯವಸ್ಥೆಯಲ್ಲಿ ಸರ್ಕಾರಿ ನೌಕರರು ಸರ್ಕಾರ ಹಾಗೂ ಜನರ ಮಧ್ಯೆ ಸಂಪರ್ಕ ಸೇತುವೆಯಂತೆ ಇದ್ದಾರೆ. ಜನ ದೇವಾಲಯಕ್ಕೆ ತಮ್ಮ ಕಷ್ಟ ಹೇಳಿಕೊಳ್ಳಲು ಹೋಗುವಂತೆ ಜನ ತಮ್ಮ ಸಮಸ್ಯೆಯನ್ನು ಹೊತ್ತು ನಿಮ್ಮ ಬಳಿಗೆ ಬರುತ್ತಾರೆ” ಎಂದು ತಿಳಿಸಿದರು.

ರಾಮನ ತಂದೆ ದಶರಥ ಹಾಗೂ ರಾಮನ ಭಂಟ ಹನುಮಂತ. ನಮ್ಮಲ್ಲಿ ದಶರಥನಿಗಿಂತ ಹನುಮಂತನ ದೇವಾಲಯಗಳೇ ಹೆಚ್ಚು. ನೀವು ಕೂಡ ನಿಮಗೆ ಅವಕಾಶ ಸಿಕ್ಕಾಗ ಸಮಾಜದ ಕೆಲಸ ಮಾಡಬೇಕು. ಮನುಷ್ಯನಲ್ಲಿ ನಂಬಿಕೆ ಇಲ್ಲದಿದ್ದರೆ ಸಂಬಂಧಗಳು ಉಳಿಯುವುದಿಲ್ಲ. ನಾವು ಜನಪ್ರತಿನಿಧಿಗಳು ಹೇಗೆ ಜನರನ್ನು ಪ್ರತಿನಿಧಿಸುತ್ತೇವೆಯೋ ಅದೇ ರೀತಿ, ಎಲ್ಲಾ ಸರ್ಕಾರಿ ನೌಕರರು ರಾಜ್ಯದ ಏಳುವರೆ ಕೋಟಿ ಜನರನ್ನು ಪ್ರತಿನಿಧಿಸುತ್ತೀರಿ.

ಮುಖ್ಯಮಂತ್ರಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಲು ಇಚ್ಛೆ ಇತ್ತು. ಆದರೆ ಅವರಿಗೆ ವೈದ್ಯರು ವಿಶ್ರಾಂತಿ ಹೇಳಿದ್ದಾರೆ. ನಮ್ಮ ಸರ್ಕಾರದ ಮೇಲೆ ಎಲ್ಲಾ ವರ್ಗದ ಜನರ ನಂಬಿಕೆ ಇಟ್ಟಿದ್ದಾರೆ. ಜಾತಿ, ಧರ್ಮದ ತಾರತಮ್ಯ ಮೇಲೆ ನನಗೆ ನಂಬಿಕೆ ಇಲ್ಲ. ಎಲ್ಲಾ ಜಾತಿ, ಸಮುದಾಯಗಳು ಬೇಕು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದ ವಿಶ್ವಕ್ಕೆ ಶಾಂತಿ ಸಿಗಲಿ ಎಂದು ನಮ್ಮ ಗುರುಗಳು ಹೇಳಿದ್ದಾರೆ. ಪ್ರತಿಯೊಬ್ಬರೂ ತಮ್ಮ ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡಿರುತ್ತಾರೆ. ಅವರ ಆಚಾರ ವಿಚಾರ ಅವರದು. ನಾವು ಅದರಲ್ಲಿ ಯಾಕೆ ಮೂಗು ತೂರಿಸಬೇಕು ಎಂದು ಅವರು ಹೇಳಿದರು.

ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರೆಲ್ಲರೂ ಒಂದೇ. ನಾವು ನಿಮ್ಮನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತೇವೆ. ನಿಮ್ಮ ಬೇಡಿಕೆಯನ್ನು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಿದ್ದೇವೆ. ನಾವು ರಾಜ್ಯದ ನಾಲ್ಕು ಕೋಟಿ ಜನರಿಗೆ ಸಹಾಯ ಮಾಡುವ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ಆಸರೆಯಾಗಲು ಪಂಚ ಗ್ಯಾರಂಟಿ ಘೋಷಣೆ ಮಾಡಿದ್ದೇವೆ. ಸರ್ಕಾರ ಹಂತಹಂತವಾಗಿ ಸಂಪನ್ಮೂಲ ಕ್ರೂಢೀಕರಣ ಆದಂತೆ ನಾವು ನಮ್ಮ ಯೋಜನೆಗಳ ಫಲಾನುಭವಿಗಳಿಗೆ ಹಣ ನೀಡುತ್ತೇವೆ. ನಾವು ಯಾರಿಗೂ ಗೃಹಲಕ್ಷ್ಮೀ ಹಣ ತಪ್ಪಿಸುವ ಪ್ರಮೇಯವೇ ಇಲ್ಲ ಎಂದು ಭರವಸೆ ನೀಡಿದರು.

Post a Comment

Previous Post Next Post