ಬೆಂಗಳೂರು: ಮಂಡಿನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಕಾರು ಖರೀದಿಗೆ ಮುಂದಾಗಿದ್ದಾರೆ.
ತಾವು ಬಳಸುತ್ತಿರುವ ಸರ್ಕಾರಿ ಕಾರಿನಲ್ಲಿ ಹತ್ತಲು ಮತ್ತು ಇಳಿಯಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ, ಸಿಎಂ ಸಿದ್ದರಾಮಯ್ಯ ಅವರು ಹೊಸ ಟೊಯೋಟಾ ವೆಲ್ಫೇರ್ ಕಾರು ಖರೀದಿ ಮಾಡಲು ಹೊರಟಿದ್ದಾರೆ.
ಪ್ರಾಯೋಗಿಕ ಕಾರಿನಲ್ಲಿ ಟೆಸ್ಟ್ ಡ್ರೈವ್ ತೆಗೆದುಕೊಂಡಿರುವ ಸಿದ್ದರಾಮಯ್ಯ, ಅದರಲ್ಲೇ ವಿಧಾನಸೌಧಕ್ಕೆ ಆಗಮಿಸಿ ಗಮನ ಸೆಳೆದರು.
ಬಜೆಟ್ ಪೂರ್ವಭಾವಿ ಸಭೆಯ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಟೊಯೋಟಾ ವೆಲ್ಫೈರ್ ಪ್ರಾಯೋಗಿಕ ಕಾರಿನಲ್ಲಿ ಟೆಸ್ಟ್ ಡ್ರೈವ್ ಪಡೆದುಕೊಂಡರು.
ಅಲ್ಲದೇ ವಿಧಾನಸೌಧದಲ್ಲಿ ನಡೆದಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಸಭೆಗೆ ಆಗಮಿಸಲು ಗಾಲಿ ಕುರ್ಚಿಯನ್ನು ಅವಲಂಬಿಸಿದರು.
ಪ್ರಸ್ತುತ ಸರ್ಕಾರಿ ಕಾರಿನಲ್ಲಿ ಪ್ರಯಾಣ ಮಾಡುವುದು ಸಿಎಂ ಸಿದ್ದರಾಮಯ್ಯ ಅವರಿಗೆ ತುಸು ಕಷ್ಟವಾಗುತ್ತಿದೆ. ಕಾರಿನಿಂದ ಕೆಳಗಡೆ ಇಳಿಯಲು ಮತ್ತು ಹತ್ತಲು ಅವರು ಕಷ್ಟಪಡುತ್ತಿದ್ದು, ಮಂಡಿನೋವು ಹೆಚ್ಚಳಕ್ಕೂ ಕಾರಣವಾಗಿದೆ. ಈ ಕಾರಣಕ್ಕಾಗಿ ಆವರ ಆಪ್ತರು ಹೊಸ ಕಾರು ಖರೀದಿಸಲು ಸಲಹೆ ನೀಡಿದ ಹಿನ್ನೆಲೆಯಲ್ಲಿ, ಸಿಎಂ ಸಿದ್ದರಾಮಯ್ಯ ವಿಧಾನಸೌಧದ ಆವರಣದಲ್ಲಿ ಹೊಸ ಕಾರಿನ ಟೆಸ್ಟ್ ಡ್ರೈವ್ ಪಡೆದುಕೊಂಡರು.
ಫಾರ್ಚೂನರ್ ಕಾರು ಬಳಸುತ್ತಿದ್ದ ಸಿಎಂಸಿಎಂ ಸಿದ್ದರಾಮಯ್ಯನವರ ಪ್ರಯಾಣಕ್ಕೆ ಟೊಯೋಟಾ ಫಾರ್ಚುನರ್ ಕಾರನ್ನು ನೀಡಲಾಗಿತ್ತು. ಆದರೆ ಮಂಡಿನೋವಿನ ಕಾರಣಕ್ಕೆ ಈ ಸರ್ಕಾರಿ ಕಾರಿನಲ್ಲಿ ಓಡಾಡುವುದು ಸಿದ್ದರಾಮಯ್ಯನವರಿಗೆ ಕಷ್ಟವಾಗುತ್ತಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಹೊಸ ಟೊಯೋಟಾ ವೆಲ್ ಫೈರ್ ಕಾರನ್ನು ಖರೀದಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ .ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಟೊಯೋಟಾ ವೆಲ್ಫೈರ್ ಕಾರನ್ನು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಪ್ರಮುಖ ರಾಜಕಾರಣಿಗಳು ಬಳಕೆ ಮಾಡುತ್ತಿದ್ದಾರೆ.