ಹಿಟಾಚಿ ವಾಹನಕ್ಕೆ ಸಿಲುಕಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ನಾಗರಹಾವನ್ನು ರಕ್ಷಿಸುವ ಮೂಲಕ ಚಾಲಕ ಮಾನವೀಯತೆ ಮೆರೆದ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.
ಮೈಸೂರು ತಾಲೂಕಿನ ವರಗೋಡು ಗ್ರಾಮದ ಜಮೀನಿನಲ್ಲಿ ಮಣ್ಣು ತುಂಬುತ್ತಿದ್ದಾಗ ಹಿಟಾಚಿಗೆ ಸಿಲುಕಿದ ನಾಗರಹಾವು ಗಂಭೀರವಾಗಿ ಗಾಯಗೊಂಡಿತ್ತು. ಇದನ್ನು ಗಮನಿಸಿದ ಹಿಟಾಚಿ ಚಾಲಕ ಕೂಡಲೇ ಉರಗ ರಕ್ಷಕ ನಿತಿನ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ನಿತಿನ್ ಸ್ಥಳಕ್ಕಾಗಮಿಸಿ ಗಾಯಗೊಂಡಿದ್ದ ನಾಗರಹಾವನ್ನು ಮೈಸೂರು ನಗರದ ಪಶುವೈದ್ಯಕೀಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು, ಪಶುವೈದ್ಯರಾದ ಡಾ. ಯಶ್ವಂತ್ ಕುಮಾರ್ ಹಾವಿಗೆ 24 ಹೊಲಿಗೆ ಹಾಕಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಹಾವು ಚೇತರಿಸಿಕೊಂಡ ಬಳಿಕ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗಿದ್ದು, ಹಾವನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಕ್ಕಾಗಿ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.