5ನೇ ತಲೆಮಾರಿನ ಯುದ್ಧ ವಿಮಾನ, ಪರಮಾಣು ಸ್ಥಾವರ: ಭಾರತ- ಅಮೆರಿಕ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಭೇಟಿ ಮಾಡಿ ಹಲವು ರಾಜತಾಂತ್ರಿಕ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಈ ಮೂಲಕ ಎರಡೂ ದೇಶಗಳ ಸಂಬಂಧ ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನ ನಡೆಯಿತು.

ಶ್ವೇತಭವನದಲ್ಲಿ ಗುರುವಾರ ಮೋದಿ ಮತ್ತು ಟ್ರಂಪ್ ಎರಡೂ ದೇಶಗಳ ನಡುವೆ ರಕ್ಷಣೆ, ತಂತ್ರಜ್ಞಾನ, ಇಂಧನ, ವಲಸೆ ನೀತಿ, ವ್ಯಾಪಾರ ಕ್ಷೇತ್ರಗಳಲ್ಲಿ ಹಲವು ಒಪ್ಪಂದಗಳನ್ನು ಮಾಡಿಕೊಂಡವು.

ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ವಿದೇಶಗಳ ಮೇಲೆ ತೆರಿಗೆ ಹೇರಿಕೆ, ಅಕ್ರಮ ವಲಸಿಗರನ್ನು ಹೊರಹಾಕುವುದು ಸೇರಿದಂತೆ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದರು. ಅಲ್ಲದೇ ಮೋದಿ ಭೇಟಿಗೂ ಮುನ್ನ ಇಂದು ಮಹತ್ವದ ದಿನವಾಗಿದ್ದು, ಹಲವು ಕಠಿಣ ತೆರಿಗೆ ಪದ್ಧತಿ ಹೊಸದಾಗಿ ಜಾರಿಗೆ ತರಲಾಗುವುದು ಎಂದು ಟ್ರಂಪ್ ಟ್ವೀಟ್ ಮಾಡಿದ್ದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.

ಫ್ರಾನ್ಸ್ ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಗುರುವಾರ ಅಮೆರಿಕಕ್ಕೆ ಬಂದಿಳಿದ ಕೆಲವೇ ಗಂಟೆಗಳಲ್ಲಿ ಶ್ವೇತಭವನದಲ್ಲಿ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಿ ಅತ್ಯಂತ ಮಹತ್ವದ ಕ್ಷೇತ್ರಗಳಲ್ಲಿ ಸಹಕಾರ- ಸಹಭಾಗಿತ್ವ ಕುರಿತು ಮಾತುಕತೆ ನಡೆಸಿದರು.

ಮಾತುಕತೆ ವೇಳೆ 5ನೇ ತಲೆಮಾರಿನ ಯುದ್ಧ ವಿಮಾನಗಳ ಖರೀದಿ, ಅಮೆರಿಕ ವಿನ್ಯಾಸದ ಪರಮಾಣು ಸ್ಥಾವರ ಭಾರತದಲ್ಲಿ ನಿರ್ಮಾಣ, 26/11 ದಾಳಿಯ ರೂವಾರಿಯನ್ನು ಭಾರತಕ್ಕೆ ಗಡಿಪಾರು ಮಾಡುವುದು, ಸಮುದ್ರದಾಳದ ಯುದ್ಧ ನೌಕೆಗಳು, ಕ್ಷಿಪಣಿಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು.

2008ರ ನಂತರ ಭಾರತ ಇದೇ ಮೊದಲ ಬಾರಿ ಪರಮಾಣು ಸ್ಥಾವರ ಸ್ಥಾಪನೆ ಕುರಿತು ಒಪ್ಪಂದ ಮಾಡಿಕೊಂಡಿದ್ದು, ಇಂಧನ ಕ್ಷೇತ್ರದಲ್ಲಿ ಭಾರೀ ಪ್ರಮಾಣದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ.

Post a Comment

Previous Post Next Post