ಮುಂಬೈ: ಔರಂಗಜೇಬನನ್ನು ಹೊಗಳಿ ಭಾರೀ ಟೀಕೆಗೆ ಗುರಿಯಾಗಿರುವ ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಅವರನ್ನು ಮಹಾರಾಷ್ಟ್ರ ವಿಧಾನಸಭೆ ಅಧಿವೇಶನದಿಂದ ಬುಧವಾರ ಅಮಾನತು ಮಾಡಲಾಗಿದೆ.
ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನ ಮುಗಿಯುವವರೆಗೂ ಅವರನ್ನು ಅಮಾನತು ಮಾಡಲಾಗಿದೆ. ವಿಧಾನಸಭೆ ಅಧಿವೇಶನ ಮಾರ್ಚ್ ೨೬ರ ವರೆಗೆ ನಡೆಯಲಿದೆ. ಅಲ್ಲಿಯವರೆಗೂ ಅಬು ಅಜ್ನಿ ಅಮಾನತಿನಲ್ಲಿ ಇರಲಿದ್ದಾರೆ.
ಸಚಿವ ಚಂದ್ರಕಾಂತ್ ಪಾಟೀಲ್ ಬುಧವಾರ ಸದನದಲ್ಲಿ ಅಬು ಅಜ್ಮಿ ಅವರನ್ನು ಸದನದಿಂದ ಅಮಾನತು ಮಾಡುವ ಪ್ರಸ್ತಾಪವನ್ನು ಮಂಡಿಸಿದರು. ಧ್ವನಿ ಮತದ ಮೂಲಕ ನಿರ್ಣಯ ಅಂಗೀಕರಿಸಲಾಯಿತು. ಬಳಿಕ ಎಸ್ಪಿ ಶಾಸಕ ಸದನದಿಂದ ಅಮಾನತಾಗಿದ್ದಾಗಿ ಸ್ಪೀಕರ್ ತಿಳಿಸಿದರು.
ಇತಿಹಾಸದಲ್ಲಿ ಕುಖ್ಯಾತಿಯಾಗಿರುವ ಔರಂಗಜೇಬನನ್ನು ಎಸ್ಪಿ ಶಾಸಕ ಹೊಗಳುವ ಮೂಲಕ ಮರಾಠಾ ರಾಜ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಅವರ ಪುತ್ರ ಛತ್ರಪತಿ ಸಂಭಾಜಿ ಮಹಾರಾಜ್ ಅವರನ್ನು ಅವಮಾನಿಸಿದಂತೆ ಎಂದು ಆಡಳಿತ ಪಕ್ಷದ ಸದಸ್ಯರು ಟೀಕಾಪ್ರಹಾರ ನಡೆಸಿದರು.
“ಔರಂಗಜೇಬನ ಹೊಗಳಿ, ಸಂಭಾಜಿ ಮಹಾರಾಜರನ್ನು ಟೀಕಿಸಿದ ಅಜ್ಮಿ ಅವರ ಹೇಳಿಕೆಗಳು ವಿಧಾನಸಭೆಯ ಸದಸ್ಯರ ಸ್ಥಾನಮಾನಕ್ಕೆ ಹೊಂದಿಕೆಯಾಗುವುದಿಲ್ಲ. ಇದು ಶಾಸಕಾಂಗ ಸಭೆಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನ ಎಂದು ಸಚಿವ ಚಂದ್ರಕಾಂತ್ ಪಾಟೀಲ್ ಹೇಳಿದರು.
ಎಸ್ಪಿ ಶಾಸಕರ ಹೇಳಿಕೆಯ ವಿರುದ್ಧ ಮಂಗಳವಾರ ವಿಧಾನಸಭೆಯ ಎರಡೂ ಸದನಗಳಲ್ಲೀ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆಡಳಿತ ಪಕ್ಷದ ಸದಸ್ಯರು ಅವರನ್ನು ಅಮಾನತುಗೊಳಿಸಬೇಕು. ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದರು.
ಅಜ್ಮಿ ಹೇಳಿದ್ದಿಷ್ಟು: ಔರಂಗಜೇಬನ ಆಳ್ವಿಕೆಯಲ್ಲಿ ಭಾರತದ ಗಡಿ ಅಫ್ಘಾನಿಸ್ತಾನ ಮತ್ತು ಬರ್ಮಾವರೆಗೂ (ಮ್ಯಾನ್ಮಾರ್) ವ್ಯಾಪಿಸಿತ್ತು. ವಿಶ್ವದ ಜಿಡಿಪಿಯಲ್ಲಿ ದೇಶದ ಜಿಡಿಪಿಯು ಶೇಕಡಾ ೨೪ ರಷ್ಟಿತ್ತು.
ಭಾರತವನ್ನು ಆತನ ಆಡಳಿತದಲ್ಲಿ ‘ಚಿನ್ನದ ಗುಬ್ಬಚ್ಚಿ’ ಎಂದು ಕರೆಯಲಾಗುತ್ತಿತ್ತು” ಎಂದು ಸಮಾಜವಾದಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಶಾಸಕ ಅಬು ಅಜ್ಮಿ ಹೇಳಿದ್ದರು.
ಔರಂಗಜೇಬ ಮತ್ತು ಮರಾಠಾ ರಾಜ ಛತ್ರಪತಿ ಸಂಭಾಜಿ ಮಹಾರಾಜ್ ನಡುವಿನ ಹೋರಾಟದ ಬಗ್ಗೆ ಪ್ರಶ್ನಿಸಿದಾಗ, “ಅದೊಂದು ಕೇವಲ ರಾಜಕೀಯ ಯುದ್ಧವಾಗಿತ್ತು” ಎಂದಿದ್ದರು.
ಹೇಳಿಕೆ ವಾಪಸ್: ತಮ್ಮ ಹೇಳಿಕೆಯು ತೀವ್ರ ವಿವಾದದ ಸ್ವರೂಪ ಪಡೆದ ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು, ನನ್ನ ಹೇಳಿಕೆಗಳನ್ನು ತಿರುಚಲಾಗಿದೆ.
ಔರಂಗಜೇಬನ ಬಗ್ಗೆ ನಾನು ಹೇಳಿದ್ದೆಲ್ಲವೂ ಇತಿಹಾಸಕಾರರು ಮತ್ತು ಬರಹಗಾರರು ಹೇಳಿರುವ ವಿಷಯ. ಶಿವಾಜಿ ಮಹಾರಾಜ, ಸಂಭಾಜಿ ಮಹಾರಾಜ ಅಥವಾ ಯಾವುದೇ ಐತಿಹಾಸಿಕ ಪುರುಷರನ್ನು ಅವಹೇಳನ ಮಾಡಿಲ್ಲ.
ಆದಾಗ್ಯೂ, ಇದರಿಂದ ನೋವಾಗಿದ್ದರೆ, ನನ್ನ ಹೇಳಿಕೆಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ” ಎಂದು ಹೇಳಿದ್ದರು.