ನಿತೀಶ್ ಕುಮಾರ್ ಬಿಟ್ಟು ಯಾರೂ ಬೇಕಾದರೂ ಸಿಎಂ ಆಗಬಹುದು: ಪ್ರಶಾಂತ್ ಕಿಶೋರ್

ಬಿಹಾರದಲ್ಲಿ ಬಿಜೆಪಿ ಜೊತೆಗೂಡಿ ವಿಧಾನಸಭೆ ಚುನಾವಣೆ ಎದುರಿಸಬಹುದು. ಆದರೆ ಚುನಾವಣೆ ನಂತರ ಸಿಎಂ ಆಗಲು ಯಾರ ಜೊತೆ ಮೈತ್ರಿ ಬೇಕಾದರೂ ಮಾಡಿಕೊಳ್ಳಬಹುದು ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಪಶ್ಚಿಮ ಚಂಪಾರನ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಕಳಪೆ ಸಾಧನೆ ಮಾಡಲಿದೆ. ಆದರೆ ನಿತೀಶ್ ಕುಮಾರ್ ಸಿಎಂ ಆಗಲು ಯಾರ ಜೊತೆ ಬೇಕಾದರೂ ಕೈ ಜೋಡಿಸಲು ಮುಂದಾಗಬಹುದು ಎಂದರು.

ಸತತ 5ನೇ ಬಾರಿ ಮುಖ್ಯಮಂತ್ರಿ ಆಗಲು 74 ವರ್ಷದ ನಿತೀಶ್ ಕುಮಾರ್ ಏನೂ ಬೇಕಾದರೂ ಮಾಡಬಹುದು. ಯಾರ ಜೊತೆ ಬೇಕಾದರೂ ಮೈತ್ರಿ ಮಾಡಿಕೊಳ್ಳಬಹುದು. ಆದರೆ ಅವರ ಮತ್ತು ಅವರ ಪಕ್ಷ ವರ್ಚಸ್ಸು ಕಳೆದುಕೊಂಡಿದ್ದು, ಹಿಂದೆಂದಿಗಿಂತಲೂ ಕಡಿಮೆ ಸ್ಥಾನ ಪಡೆಯಲಿದೆ ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಮುಂದಿನ ಬಾರಿ ನಿತೀಶ್ ಕುಮಾರ್ ಹೊರತುಪಡಿಸಿ ಯಾರೂ ಬೇಕಾದರೂ ಸಿಎಂ ಆಗಬಹುದು. ಇದನ್ನು ಬರೆದಿಟ್ಟುಕೊಳ್ಳಿ. ಒಂದು ವೇಳೆ ಈ ಮಾತು ಸುಳ್ಳಾದರೆ ನಾನು ರಾಜಕೀಯ ತಂತ್ರಗಾರಿಕೆ ಮಾಡುವುದನ್ನೇ ತ್ಯಜಿಸುತ್ತೇನೆ ಎಂದು ಜನ್ ಸೂರಜ್ ಪಕ್ಷದ ಮುಖಂಡರೂ ಆಗಿರುವ ಪ್ರಶಾಂತ್ ಕಿಶೋರ್ ಹೇಳಿದರು.

ನಿತೀಶ್ ಕುಮಾರ್ ಮೊದಲಿನಿಂದಲೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡೇ ಚುನಾವಣೆ ಎದುರಿಸುತ್ತಾ ಬಂದಿದ್ದಾರೆ. ಫಲಿತಾಂಶ ಹೊರಬಿದ್ದ ನಂತರ ತಮಗೆ ಅನುಕೂಲ ಆಗುವ ಪಕ್ಷದ ಜೊತೆ ಮೈತ್ರಿ ಬದಲಾಯಿಸುತ್ತಾರೆ. ಬಿಜೆಪಿ ಕೂಡ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಘೋಷಿಸಲು ಹಿಂದೇಟು ಹಾಕುತ್ತಿದೆ. ಏಕೆಂದರೆ ನಿತೀಶ್ ಜನಪ್ರಿಯತೆ ಕುಸಿದಿರುವುದು ಎಂದು ಅವರು ವಿವರಿಸಿದರು.

ನಿತೀಶ್ ಕುಮಾರ್ ೫ ವರ್ಷಗಳ ಪೂರ್ಣಾವಧಿಯ ಸಿಎಂ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ನಾನು ಸವಾಲು ಹಾಕುತ್ತೇನೆ. ಏಕೆಂದರೆ ಎನ್ ಡಿಎ ಮೈತ್ರಿಗೂ ರಾಜ್ಯದಲ್ಲಿ ಅಸಮಾಧಾನ ಇದೆ ಎಂದು ಅವರು ಹೇಳಿದರು.

Post a Comment

Previous Post Next Post