ಭಾರತ ತಂಡದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮತ್ತು ರವೀಂದ್ರ ಜಡೇಜಾ ಸೇರಿದಂತೆ ಹಲವು ಆಟಗಾರರಿಗೆ ಕೇಂದ್ರ ಗುತ್ತಿಗೆ ಒಪ್ಪಂದದಲ್ಲಿ ಎ ಪ್ಲಸ್ ಪಟ್ಟಿಯಿಂದ ಬಿಸಿಸಿಐ ಹಿಂಬಡ್ತಿ ನೀಡಲಿದೆಯೇ ಎಂಬ ಅನುಮಾನ ಉಂಟಾಗಿದೆ.
ಬಿಸಿಸಿಐ ಸಾಮಾನ್ಯವಾಗಿ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಐಪಿಎಲ್ ಟಿ-20 ಟೂರ್ನಿ ಆರಂಭಕ್ಕೂ ಮುನ್ನ ಬಿಡುಗಡೆ ಮಾಡುತ್ತಿತ್ತು. ಆದರೆ ಬಿಸಿಸಿಐ ಇನ್ನೂ ಬಿಡುಗಡೆ ಮಾಡದೇ ಇರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಬಿಸಿಸಿಐ ಗುತ್ತಿಗೆ ನಿಯಮದ ಪ್ರಕಾರ ಟೆಸ್ಟ್, ಏಕದಿನ ಮತ್ತು ಟಿ-20 ಮೂರೂ ಮಾದರಿಯ ಕ್ರಿಕೆಟ್ ನಲ್ಲಿ ಆಡುವ ಪ್ರಮುಖ ಆಟಗಾರರಿಗೆ ಮಾತ್ರ ಎ ಪ್ಲಸ್ ಹಂತದಲ್ಲಿ ಸೇರಿಸಲಾಗುತ್ತಿತ್ತು. ಆದರೆ ಇದೀಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮತ್ತು ರವೀಂದ್ರ ಜಡೇಜಾ ಈಗಾಗಲೇ ಟಿ-20ಗೆ ವಿದಾಯ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಎ ಪ್ಲಸ್ ಕೆಟಗರಿಗೆ ಸೇರಿಸಬೇಕೆ ಅಥವಾ ಬೇಡವೇ ಎಂಬ ಚರ್ಚೆ ನಡೆಯುತ್ತಿದೆ.
ಕೊಹ್ಲಿ, ರೋಹಿತ್ ಶರ್ಮ ಮತ್ತು ರವೀಂದ್ರ ಜಡೇಜಾ ಅವರನ್ನು ಕೈಬಿಡಲು ಬಿಸಿಸಿಐ ಚಿಂತನೆ ನಡೆಸಿದ್ದು, ಚಾಂಪಿಯನ್ಸ್ ಟ್ರೋಫಿ ಮುಗಿದ ನಂತರ ಗುತ್ತಿಗೆ ಪಟ್ಟಿ ಪ್ರಕಟಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ. ಇದೇ ವೇಳೆ ಎ ಪ್ಲಸ್ ಕೆಟಗರಿಯಲ್ಲಿ ಇರುವ ಜಸ್ ಪ್ರೀತ್ ಬುಮ್ರಾ ಪೂರ್ಣ ಪ್ರಮಾಣದಲ್ಲಿ ಆಡಲು ಆಗುತ್ತಿಲ್ಲ. ಒಂದು ವೇಳೆ ಈ ನಾಲ್ವರನ್ನು ಬಿಟ್ಟರೆ ಎ ಪ್ಲಸ್ ವಿಭಾಗದಲ್ಲಿ ಆಟಗಾರರೇ ಇಲ್ಲದಂತೆ ಆಗುವ ಭೀತಿಯೂ ಇದೆ.
ಚಾಂಪಿಯನ್ಸ್ ಟ್ರೋಫಿ ನಂತರ ರೋಹಿತ್ ಶರ್ಮ ನಿವೃತ್ತಿ ನಿರ್ಧಾರ ಕೈಗೊಳ್ಳುತ್ತಾರಾ ಎಂದು ಬಿಸಿಸಿಐ ನಿರೀಕ್ಷಿಸುತ್ತಿದೆ ಎಂದು ಹೇಳಲಾಗಿದೆ. ಒಂದು ವೇಳೆ ನಿವೃತ್ತಿ ಕೈಗೊಳ್ಳದೇ ಇದ್ದರೆ ಎ ಪ್ಲಸ್ ವಿಭಾಗದಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಪ್ರಸ್ತುತ ರೋಹಿತ್, ಕೊಹ್ಲಿ ಮತ್ತು ಜಡೇಜಾ ಚಾಂಪಿಯನ್ಸ್ ಟ್ರೋಫಿ ನಂತರ ನಿವೃತ್ತಿ ಘೋಷಿಸಬಹುದು ಎಂದು ಕೂಡ ವದಂತಿಗಳು ಹರಡುತ್ತಿವೆ.
ಕಳೆದ ವರ್ಷ ಶಿಸ್ತು ಸಮಿತಿಯಿಂದ ಶಿಕ್ಷೆಗೆ ಗುರಿಯಾಗಿದ್ದ ಶ್ರೇಯಸ್ ಅಯ್ಯರ್ ಈ ಬಾರಿ ಗುತ್ತಿಗೆ ಒಪ್ಪಂದಕ್ಕೆ ಮರಳುವ ಸಾಧ್ಯತೆ ಇದೆ. ಇದೇ ವೇಳೆ ಹಿಂಬಡ್ತಿ ಪಡೆದಿದ್ದ ಕೆಎಲ್ ರಾಹುಲ್ ಉತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ ಮುಂಬಡ್ತಿ ಪಡೆಯುವ ಸಾಧ್ಯತೆ ಇದೆ.