ನವದೆಹಲಿ: ಮುಂಬರುವ ಬೇಸಿಗೆಯಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ಅಲೆಯ ಪರಿಸ್ಥಿತಿಗಳು ಮತ್ತು ತಾಪಮಾನ ಉಂಟಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
1901ರ ನಂತರದ ಅತ್ಯಂತ ಬಿಸಿಯಾದ ತಿಂಗಳು ಈ ವರ್ಷ ಫೆಬ್ರವರಿಯಲ್ಲಿ ದಾಖಲಾಗಿದೆ. ಸರಾಸರಿ ತಾಪಮಾನ 20.7 ಡಿಗ್ರಿ ಸೆಲ್ಸಿಯಸ್ ಗೆ ಹೋಲಿಸಿದರೆ 22.04 ಡಿಗ್ರಿ ಸೆಲ್ಸಿಯಸ್ ನಲ್ಲಿ ದಾಖಲಾಗಿದೆ. ಅಂದರೆ 1.37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಸರಾಸರಿಗಿಂತ ಹೆಚ್ಚಾಗಿದೆ.
1901 ರ ನಂತರದ ಎರಡನೇ ಅತಿ ಹೆಚ್ಚು ಗರಿಷ್ಠ ತಾಪಮಾನ ಮತ್ತು ಅತ್ಯಧಿಕ ಕನಿಷ್ಠ ತಾಪಮಾನವನ್ನು ದಾಖಲಿಸಿದೆ. ಫೆಬ್ರವರಿಯಲ್ಲಿ ಮಧ್ಯ ಮತ್ತು ದಕ್ಷಿಣ ಪ್ರದೇಶಗಳು ಸಹ ಬೆಚ್ಚಗಿನ ತಾಪಮಾನ ಕಂಡುಬಂದಿದೆ.
ಜನವರಿ ಮತ್ತು ಫೆಬ್ರವರಿ ನಡುವೆ ದೇಶದಲ್ಲಿ ಶೇಕಡಾ 59ರಷ್ಟು ಕೊರತೆಯ ಮಳೆಯಾಗಿದೆ. ಮಧ್ಯ ಭಾರತದಲ್ಲಿ ಶೇಕಡಾ 89ರಷ್ಟು ಕೊರತೆಯ ಮಳೆಯಾಗಿದೆ, ನಂತರ ವಾಯುವ್ಯ ಭಾರತದಲ್ಲಿ ಶೇಕಡಾ ೬೪ರಷ್ಟು ಕೊರತೆಯ ಮಳೆಯಾಗಿದೆ.
ದೀರ್ಘ ಮುನ್ಸೂಚನೆಯ ಪ್ರಕಾರ, ಪರ್ಯಾಯ ದ್ವೀಪ ಭಾರತದ ದಕ್ಷಿಣ ಭಾಗಗಳು ಮತ್ತು ಈಶಾನ್ಯ ಭಾರತದ ಪ್ರತ್ಯೇಕ ಪ್ರದೇಶಗಳನ್ನು ಹೊರತುಪಡಿಸಿ, ಭಾರತದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳು ಹೆಚ್ಚಾಗಿ ಕಂಡುಬರುತ್ತವೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಈಶಾನ್ಯ ಭಾರತ, ತೀವ್ರ ಉತ್ತರ ಭಾರತ ಮತ್ತು ಪರ್ಯಾಯ ದ್ವೀಪದ ನೈಋತ್ಯ ಮತ್ತು ದಕ್ಷಿಣ ಭಾಗಗಳನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ಮಾರ್ಚ್ ನಿಂದ ಮೇ 2025ರವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ಅಲೆಯ ದಿನಗಳು ಇರಬಹುದೆಂದು ಅದು ಮುನ್ಸೂಚನೆ ನೀಡಿದೆ.
ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಮತ್ತು ಶಾಖದ ಅಲೆಯ ದಿನಗಳ ಮುನ್ಸೂಚನೆಗಳು ರೈತರಲ್ಲಿ ಕಳವಳ ಉಂಟುಮಾಡಿದೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಗೋಧಿಯಂತಹ ಪ್ರಮುಖ ರಬಿ ಬೆಳೆಗಳ ಕೊಯ್ಲು ಮಾರ್ಚ್ ಮಧ್ಯದಲ್ಲಿ ಪ್ರಾರಂಭವಾಗಲಿದೆ.