ಗ್ಯಾರಂಟಿ ಹಣ ಕೃಷಿಗೆ ಕೊಟ್ಟರೆ, 100 ಗ್ಯಾರಂಟಿಗೆ ಸಮ: ಕೇಂದ್ರ ಸಚಿವ ಕುಮಾರಸ್ವಾಮಿ

ಗ್ಯಾರಂಟಿಗಳಿಗೆ ವೆಚ್ಚ ಮಾಡುವ ಅಷ್ಟು ಹಣವನ್ನು ಒಂದು ವರ್ಷದ ಮಟ್ಟಿಗೆ ಕೃಷಿ, ತೋಟಗಾರಿಕೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲಿ. ಎರಡೂ ಕ್ಷೇತ್ರಗಳಿಗೆ ಕಾಯಕಲ್ಪ ಮಾಡಿದರೆ ಕರ್ನಾಟಕ ಇಡೀ ದೇಶಕ್ಕೆ ಮಾದರಿ ಆಗಲಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಒತ್ತಿ ಹೇಳಿದರು.

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ತೋಟಗಾರಿಕಾ ಮೇಳ – 2025 ಸಮಾರೋಪ ಸಮಾರಂಭದಲ್ಲಿ  ಮಾತನಾಡಿದ ಅವರು, ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ನಾನು ಗ್ಯಾರಂಟಿಗಳನ್ನು ವಿರೋಧ ಮಾಡುವುದಿಲ್ಲ. ಆದರೆ, ಗ್ಯಾರೆಂಟಿ ಕೊಟ್ಟು ಅದೇ ಗ್ರಾಮೀಣ ಜನರ ಜೀವನಾಡಿ ಆಗಿರುವ ಕೃಷಿಯನ್ನು ನಿರ್ಲಕ್ಷ್ಯ ಮಾಡಬೇಡಿ ಎಂದು ಹೇಳಿದ್ದೇನೆ.  ರಾಜ್ಯದ ಜನರು ಕಷ್ಟಕಾಲದಲ್ಲಿಯೂ ತೆರಿಗೆ ಕಟ್ಟಿ ಖಜಾನೆ ಮಾಡಿದ್ದಾರೆ. ವರ್ಷಕ್ಕೆ ರಾಜ್ಯ ಸರ್ಕಾರ 52,000 ಕೋಟಿ ಹಣವನ್ನು ಗ್ಯಾರಂಟಿಗಳಿಗೆ ವೆಚ್ಚ ಮಾಡುತ್ತಿದೆ ಎಂದರು.

ಗ್ಯಾರಂಟಿ ಹಣದಿಂದ ಕೃಷಿಕರ ಬದುಕು ಹಸನು ಆಗುವುದಿಲ್ಲ. ಆದರೆ, ಕೃಷಿ, ತೋಟಗಾರಿಕೆಗೆ ಶಕ್ತಿ ಈ ತುಂಬಿದರೆ, ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಇಂಥ ನೂರು ಗ್ಯಾರಂಟಿ ಕೊಡುವುದಕ್ಕೆ ಸಮವಾಗುತ್ತದೆ. ಇದರ ಬಗ್ಗೆ ಸರ್ಕಾರ ಆಲೋಚನೆ ಮಾಡಬೇಕು. ರೈತರ ಬದುಕು ಶಾಶ್ವತವಾಗಿ ಹಸನು ಮಾಡುವ ಬಗ್ಗೆ ಸರ್ಕಾರ ಆಲೋಚನೆ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ತೋಟಗಾರಿಕೆಯಿಂದ ರೈತರು ಹೆಚ್ಚು ಆದಾಯ ಗಳಿಸುವ ಅಗತ್ಯ ಇದೆ. ವೈವಿಧ್ಯಮಯ ಬೆಳೆ ತೆಗೆಯಬೇಕು, ಅಧಿಕಾರಿಗಳು, ತಜ್ಞರು ರೈತರಿಗೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕು. ಯುವ ರೈತರನ್ನು ಇಂಥ ಸಂಸ್ಥೆಗಳಿಗೆ ಕರೆದುಕೊಂಡು ಬಂದು, ಕೊನೆಪಕ್ಷ ಹದಿನೈದು ದಿನಗಳ ಕಾಲ ತರಬೇತಿ ಕೊಡಬೇಕು. ಆಧುನಿಕ ರೀತಿಯಲ್ಲಿ ತೋಟಗಾರಿಕೆ ಕೃಷಿ ಮಾಡಿದರೆ ಹೇಗೆ ಲಾಭ ಬರುತ್ತದೆ ಎನ್ನುವುದನ್ನು ಹೇಳಬೇಕು. ತಂತ್ರಜ್ಞಾನ ಹೇಗೆ ಬೆಳೆಯುತ್ತಿದೆ, ಜಗತ್ತನ್ನ ಬೇರೆ ಬೇರೆ ಭಾಗಗಳಲ್ಲಿ ಹೇಗೆ ಕೃಷಿ ಮಾಡಲಾಗುತ್ತದೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ತೆಗೆಯುವುದು ಹೇಗೆ ಎಂಬ ಬಗ್ಗೆ ಯುವ ರೈತರಿಗೆ ತಿಳಿ ಹೇಳಬೇಕು ಎಂದು ಸಚಿವರು ಸಲಹೆ ನೀಡಿದರು.

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಾ. ಸಿ ಎನ್ ಮಂಜುನಾಥ್, ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಅಶೋಕ್ ದಲ್ವಾಲ್, ಭಾರತೀಯ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ ಅಧ್ಯಕ್ಷ ಡಾ. ಮೇಜರ್ ಸಿಂಗ್, ರಾಜ್ಯದ ಕೃಷಿ ಆಯುಕ್ತ ವೈ.ಎಸ್. ಪಾಟೀಲ್, ತೋಟಗಾರಿಕಾ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್, ಮೇಳದ ಸಂಘಟನಾ ಕಾರ್ಯದರ್ಶಿ ಡಾ. ಶಂಕರ್ ಹೆಬ್ಬಾರ್ ಹಾಗೂ ICAR ನಿರ್ದೇಶಕ ಡಾ. ತುಷಾರ್ ಕಾಂತಿ ಬೆಹರಾ ಅವರು ಉಪಸ್ಥಿತರಿದ್ದರು.

Post a Comment

Previous Post Next Post