ಬೆಂಗಳೂರು: ಕರ್ನಾಟಕದ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ತಾಜ್ ಅಲಿ ಮೌಲಾಸಾಬ್ ನದಾಫ್ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.
ತಾಜ್ ಅಲಿ ಮೌಲಾಸಾಬ್ ಅವರನ್ನು ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅಧಿಕಾರ ಪ್ರಮಾಣವಚನ ಬೋಧಿಸಿದರು.
ಕರ್ನಾಟಕ ವಕೀಲರ ಪರಿಷತ್ ಅಧ್ಯಕ್ಷ ಹೆಚ್.ಎಲ್.ವಿಶಾಲ ರಘು ನೂತನ ಹೆಚ್ಚುವರಿ ನ್ಯಾಯಾಧೀಶರಾದ ನ್ಯಾಯಮೂರ್ತಿ ತಾಜ್ ಅಲಿ ಮೌಲಾಸಾಬ್ ಅವರನ್ನು ಸ್ವಾಗತಿಸಿದರು.
1976ರಲ್ಲಿ ಹಾವೇರಿಯ ಶಿಗ್ಗಾಂವ್ ನಲ್ಲಿ ಜನಿಸಿದ ತಾಜ್ ಅಲಿ ಮೌಲಾಸಾಬ್, ಪ್ರಾಥಮಿಕ ಶಿಕ್ಷಣವನ್ನು ಕಾರವಾರದಲ್ಲಿ ಪೂರೈಸಿ, ಕಾನೂನು ಪದವಿ ಶಿಕ್ಷಣವನ್ನು ಬೆಂಗಳೂರಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಪೂರೈಸಿದ್ದಾರೆ. ಆಗಸ್ಟ್ 11, 2000 ರಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ವಕೀಲರಾಗಿ ನೋಂದಾಯಿಸಿ, ಖ್ಯಾತ ವಕೀಲ ಕೆ.ಅಪ್ಪಾರಾವ್ ಹಾಗೂ ಅಶೋಕ್ ಆರ್. ಕಲ್ಯಾಣ್ ಶೆಟ್ಟಿ ಇವರ ಕಚೇರಿಯಲ್ಲಿ ವೃತ್ತಿ ಜೀವನ ಆರಂಭಿಸಿದರು.
ನಂತರ ವಕೀಲರಾದ ಪಿ.ಕೆ.ಪೊನ್ನಣ್ಣನವರ ಮಾರ್ಗದರ್ಶನದಲ್ಲಿ ವಿಚಾರಣಾ ನ್ಯಾಯಾಲಯದಲ್ಲಿಯೂ ಸಹ ವಕೀಲಿಕೆಯನ್ನು ನಡೆಸಿ, ಸ್ವಂತವಾಗಿ ವೃತ್ತಿ ಆರಂಭಿಸಿ ಸಿವಿಲ್, ಕ್ರಿಮಿನಲ್ ಮತು ಇನ್ನಿತರ ನ್ಯಾಯಮಂಡಳಿಗಳಲ್ಲಿ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯಗಳಲ್ಲಿ ವಿವಿಧ ಪ್ರಕರಣಗಳನ್ನು ಯಶಸ್ವಿಯಾಗಿ ನಡೆಸಿದರು. ಅವರು ಧಾರವಾಡ ಜಿಲ್ಲೆಯಲ್ಲಿ ಸಹ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು.
2020 ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ಜಿಲ್ಲಾ ನ್ಯಾಯಾಂಗದ ಕಾನೂನು ಕೋಶ (ಲೀಗಲ್ ಸೆಲ್) ವಿಭಾಗದಲ್ಲಿ ಅರ್ಜಿದಾರರ ಪರ ವಾದಿಸುವ ಸಲಹೆಗಾರರಾಗಿ ನೇಮಕಗೊಂಡಿದ್ದರು. ಇವರು ತಮ್ಮ ನ್ಯಾಯ ನಿಷ್ಠೆ, ಕಾನೂನಿನ ಅಪಾರ ಜ್ಞಾನ, ಅನುಭವ ಮತ್ತು ನ್ಯಾಯಸಮ್ಮತದ ಕೌಶಲ್ಯವನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಮುಂದಿನ 2 ವರ್ಷಗಳ ಕಾಲ ಜನರಿಗೆ ಒಳ್ಳೆಯ ಸೇವೆ ನೀಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು, ವಕೀಲರು, ನ್ಯಾಯಾಂಗದ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.