ತುಂಬಿದ ಕೊಡ ತುಳಿಕೀತಾಳೆ ಪರಾಕ್: ಮೈಲಾರಲಿಂಗೇಶ್ವರ ಕಾರ್ಣಿಕದಲ್ಲಿ ಗೊರವಯ್ಯ ಭವಿಷ್ಯವಾಣಿ

ಇತಿಹಾಸ ಪ್ರಸಿದ್ಧ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಕಾರ್ಣಿಕ ಶುಕ್ರವಾರ ಸಂಜೆ “ತುಂಬಿದ ಕೊಡ ತುಳುಕಿತಲೇ ಪರಾಕ್’ ಎಂದು ಗೊರವಪ್ಪ ನುಡಿದಿದ್ದು, ಶುಭ ಸೂಚಕ ಎನ್ನಲಾಗಿದೆ.

ಪ್ರತಿ ವರ್ಷ ಮೈಲಾರ ಕಾರ್ಣಿಕದ ನುಡಿಯನ್ನು ಭವಿಷ್ಯವಾಣಿ ಎಂದು ನಂಬಿರುವ ಲಕ್ಷಾಂತರ ಭಕ್ತರು ಮೈಲಾರ ಜಾತ್ರೆಗೆ ಕಾದು ಕುಳಿತಿದ್ದು,ಸಂಜೆ 5.30 ನಿಮಿಷಕ್ಕೆ 18 ಅಡಿ ಬಿಲ್ಲೇನೇರಿದ ಗೊರವಯ್ಯ ರಾಮಪ್ಪಜ್ಜ ಬಿಲ್ಲೇರಿ ಸದ್ದಲೇ ಎನ್ನುತ್ತಿದ್ದಂತೆ ಲಕ್ಷಾಂತರ ಸಂಖ್ಯೆಯಲ್ಲಿದ್ದ ಜನಸ್ತೋಮ ಸ್ಥಬ್ಧವಾಯಿತು.ತುಂಬಿದ ಕೊಡ ತುಳುಕೀತಲೇ ಪರಾಕ್ ಎಂದು ನುಡಿದು ಕೆಳಗೆ ಧುಮುಕಿದರು.

ಗೊರವಪ್ಪಜ್ಜ ಕಾರ್ಣಿಕ ನುಡಿಯುತ್ತಿದ್ದಂತೆ ಭಕ್ತರು ಕಾರ್ಣಿಕ ವಿಶ್ಲೇಷಣೆ ಮಾಡಲಾರಂಭಿಸಿದ್ದು, ಶ್ರೀಮೈಲಾರಲಿಂಗೇಶ್ವರ ದೇಗುಲದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಈ ವರ್ಷದ ಕಾರ್ಣಿಕವನ್ನು ಶುಭ ಸೂಚಕವಾಗಿದೆ ಎಂದು ತಿಳಿಸಿದ್ದಾರೆ.

ಎಲ್ಲವೂ ಸೂಸೂತ್ರವಾಗಿರಲಿದೆ. ಮಳೆ, ಬೆಳೆ, ಎಲ್ಲವೂ ಕೂಡ ಸಂಪನ್ನವಾಗಲಿದೆ. ರೈತರಿಗೆ ಶುಭವಾಗಲಿದೆ. ಕಳೆದ ಬಾರಿಯೂ ಉತ್ತಮ ಮಳೆ, ಬೆಳೆ ಎಲ್ಲವೂ ಉತ್ತಮವಾಗಿದ್ದವು ಎಂದು ವೆಂಕಪ್ಪಯ್ಯ ಒಡೆಯರ್ ಕಾರ್ಣಿಕ ವಿಶ್ಲೇಷಣೆ ಮಾಡಿದ್ದಾರೆ.

ಕ್ಷೇತ್ರದಲ್ಲಿ ಫೆಬ್ರುವರಿ 4 ರಿಂದಲೇ ಮೈಲಾರದ ಮೈಲಾರಲಿಂಗೇಶ್ವರನ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು‌ ಹಾಲು ಉಕ್ಕಿಸುವುದು, ಮೈಲಾರಲಿಂಗೇಶ್ವರ ಪಲ್ಲಕ್ಕಿ ಉತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು ಅಲ್ಲಿಂದ ಹನ್ನೊಂದು ದಿನಗಳ ಕಾಲ ಪ್ರತಿದಿನ ಎರಡು ಬಾರಿ ಮೈಲಾರಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಗೊರವಯ್ಯ ಹನ್ನೊಂದು ದಿನಗಳ ಕಾಲ ಕಠಿಣ ಉಪವಾಸ ವೃತ ಕೈಗೊಂಡು ಕಾರ್ಣಿಕ ನುಡಿದರು. ಈ ಕಾರ್ಣಿಕ ಕೇಳಲು ರಾಜ್ಯ, ಹೊರರಾಜ್ಯ ಹಾಗೂ ಹೊರದೇಶಗಳಿಂದಲೂ ಭಕ್ತರು ಮೈಲಾರಕ್ಕೆ ಆಗಮಿಸಿದ್ದರು. ನಾಲ್ಕು ಲಕ್ಷಕ್ಕೂ ಅಧಿಕ ಭಕ್ತರು ಪ್ರಸ್ತುತ ವರ್ಷದ ಭವಿಷ್ಯವಾಣಿಗೆ ಸಾಕ್ಷಿಯಾದರು. ಇನ್ನು ಕಾರ್ಣಿಕವಾಣಿ ಆಲಿಸಲು ಭಕ್ತರ ದಂಡು ಜಾತ್ರೆಗೆ ಆಗಮಿಸುವ ನಿರೀಕ್ಷೆ ಇದ್ದರು ಸಹ ವಿಜಯನಗರ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.

Post a Comment

Previous Post Next Post