ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಸ್ಥಾನ ಭದ್ರ? ಸುರ್ಜೆವಾಲಾ ಸ್ಥಾನಕ್ಕೆ ಭೂಪೇಶ್ ನೇಮಕ?

ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರ ನೇಮಕ ಬದಲಾವಣೆ ಮಾಡದೇ ಇರಲು ಎಐಸಿಸಿ ಚಿಂತನೆ ನಡೆಸಿದೆ ಎಂದು ಮೂಲಗಳು ದೃಢಪಡಿಸಿವೆ.

ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೇಶಾದ್ಯಂತ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆ ನಡೆದಿದ್ದು, 8 ದಿನದಲ್ಲಿ ಎಲ್ಲಾ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿಕೆ ನೀಡಿದ್ದರಿಂದ ಕುತೂಹಲ ಮೂಡಿಸಿದ್ದ ರಾಜ್ಯಾಧ್ಯಕ್ಷರ ನೇಮಕ ರಾಜ್ಯಕ್ಕೆ ಅನ್ವಯ ಆಗುವುದಿಲ್ಲ ಎಂದು ಹೇಳಲಾಗಿದೆ.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಬೇಕು ಎಂದು ಪಕ್ಷದಲ್ಲಿ ಒತ್ತಡ ಕೇಳಿದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಬದಲಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಇದೀಗ ಎಐಸಿಸಿ ಮೂಲಗಳ ಪ್ರಕಾರ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ರಾಜ್ಯಕ್ಕೆ ಅನ್ವಯ ಮಾಡಿ ವರದಿಗಳು ಬಂದಿದ್ದರಿಂದ ಈ ಗೊಂದಲ ಉಂಟಾಗಿದೆ ಎಂದು ಹೇಳಲಾಗಿದೆ.

ಸುರ್ಜೆವಾಲಾ ಸ್ಥಾನಕ್ಕೆ ಬಘೇಲ ನೇಮಕ?

ಮೂಲಗಳ ಪ್ರಕಾರ ಪಕ್ಷದ ರಾಜ್ಯಾಧ್ಯಕ್ಷರ ನೇಮಕ ಮಾಡದೇ ಪಕ್ಷದ ರಾಜ್ಯ ಉಸ್ತುವಾರಿ ನೇಮಕದಲ್ಲಿ ಬದಲಾವಣೆ ಆಗಲಿದೆ ಎಂದು ಹೇಳಲಾಗಿದೆ.

ಹಲವು ವರ್ಷಗಳಿಂದ ಪಕ್ಷದ ರಾಜ್ಯ ಉಸ್ತುವಾರಿ ಆಗಿರುವ ರಣದೀಪ್ ಸುರ್ಜೆವಾಲಾ ಅವರನ್ನು ಸೇವೆಯಿಂದ ಮುಕ್ತಿಗೊಳಿಸಿ ಅವರ ಸ್ಥಾನಕ್ಕೆ ಛತ್ತೀಸಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ.

ಹರಿಯಾಣ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ರಣದೀಪ್ ಸುರ್ಜೆವಾಲಾ ಕರ್ನಾಟಕ ಉಸ್ತುವಾರಿಯಿಂದ ಬಿಡುಗಡೆ ಮಾಡುವಂತೆ ಕೆಲವು ದಿನಗಳ ಹಿಂದೆ ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಭೂಪೇಶ್ ಬಘೇಲ್ ಅವರನ್ನು ನೇಮಕ ಮಾಡಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.

ಖರ್ಗೆ ಭೇಟಿ ಮಾಡಿದ ರಾಜಣ್ಣ

ಇದೇ ವೇಳೆ ಸಚಿವ ಕೆ.ಎಸ್. ರಾಜಣ್ಣ ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ದೆಹಲಿಯಲ್ಲಿ ಖರ್ಗೆ ನಿವಾಸಕ್ಕೆ ಭೇಟಿ ನೀಡಿರುವ ರಾಜಣ್ಣ ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದ ರಾಜ್ಯಾಧ್ಯಕ್ಷರ ನೇಮಕ ಕುರಿತು ಗೊಂದಲ ಮುಂದುವರಿದಿದೆ.

ರಾಜಣ್ಣ, ಪರಮೇಶ್ವರ್, ಸತೀಶ್ ಜಾರಕಿಹೊಳಿ ಮತ್ತು ಎಚ್. ಸಿ. ಮಹದೇವಪ್ಪ ಸೇರಿದಂತೆ ದಲಿತ ಸಚಿವರು ಇತ್ತೀಚೆಗೆ ಸಭೆ ಸೇರಿ ಮಾತುಕತೆ ನಡೆಸಿದ್ದು, ಸಿದ್ದರಾಮಯ್ಯ ಪೂರ್ಣಾವಧಿಗೆ ಸಿಎಂ ಆಗಿ ಮುಂದುವರಿಯದೇ ಇದ್ದರೆ ದಲಿತ ಸಿಎಂ ನೇಮಕ ಮಾಡುವಂತೆ ಒತ್ತಡ ಹೇರುವ ತಂತ್ರ ಅನುಸರಿಸಲಾಗುತ್ತಿದೆ ಎಂದು ಹೇಳಲಾಗಿದೆ. ಅಲ್ಲದೇ ರಾಜ್ಯ ಮಟ್ಟದಲ್ಲಿ ದಲಿತ ಸಮಾವೇಶಕ್ಕೆ ಚಿಂತನೆ ನಡೆದಿದ್ದು, ಖರ್ಗೆ ಅವರ ಅನುಮತಿ ಪಡೆಯುವ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Post a Comment

Previous Post Next Post