ಕೆಳ ಕ್ರಮಾಂಕದಲ್ಲಿ ಚಿನೆಲಿ ಹ್ಯಾನ್ರಿ ಸಿಡಿಲಬ್ಬರದ ಬ್ಯಾಟಿಂಗ್ ಮತ್ತು ಗ್ರೇಸ್ ಹ್ಯಾರಿಸ್ ಚೊಚ್ಚಲ ಹ್ಯಾಟ್ರಿಕ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 33 ರನ್ ಗಳ ಭಾರೀ ಅಂತರದಿಂದ ಮಣಿಸಿದ ಯುಪಿ ವಾರಿಯರ್ಸ್ ತಂಡ ಡಬ್ಲೂಪಿಎಲ್ ಟಿ-20 ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು. ಈ ಮೂಲಕ ಮೊದಲು ಬ್ಯಾಟ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ತಂಡ 9 ವಿಕೆಟ್ ಗೆ 177 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.3 ಓವರ್ ಗಳಲ್ಲಿ 144 ರನ್ ಗೆ ಆಲೌಟಾಯಿತು.
ಡೆಲ್ಲಿ ಪರ ಜೆಮಿಹಾ ರೋಡ್ರಿಗಜ್ 35 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 56 ರನ್ ಬಾರಿಸಿದರು. ಆರಂಭಿಕ ಆಟಗಾರ್ತಿ (24), ನಿಕ್ಕಿ ಪ್ರಸಾದ್ (18) ಮತ್ತು ಶಿಖಾ ಪಾಂಡೆ (15) ಮಾತ್ರ ಹೋರಾಟ ನಡೆಸಿದರು. ಯುಪಿ ಪರ ಕ್ರಾಂತಿ ಕೌಡ್ ಮತ್ತು ಗೇಸ್ ಹ್ಯಾರಿ ತಲಾ 4 ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಯುಪಿ 109 ರನ್ ಗೆ 7 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಆದರೆ ಚಿನೆಲಿ ಹೆನ್ರಿ 23 ಎಸೆತಗಳಲ್ಲಿ 2 ಬೌಂಡರಿ ಮತ್ತು 8 ಸಿಕ್ಸರ್ ಸಿಡಿಸಿ 62 ರನ್ ಪೇರಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಹ್ಯಾರಿಸ್ ಡಬ್ಲೂಪಿಎಲ್ ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೂರನೇ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು.