ನಮ್ಮ ಮಾತೃಭಾಷೆ ಮರಾಠಿ ಆಗಿರಬಹುದು. ಆದರೆ ನಾವು ಸಹ ಕನ್ನಡಿಗರೇ ಎಂದು ಹೇಳಿರುವ ಮಹಿಳೆ, ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕನ ವಿರುದ್ಧ ದಾಖಲಿಸಿದ್ದ ಅಸಭ್ಯ ವರ್ತನೆ ದೂರನ್ನು ವಾಪಸ್ ಪಡೆದಿದ್ದಾರೆ.
ಮಂಗಳವಾರ ಬೆಳಗಾವಿ ಪೊಲೀಸ್ ಠಾಣೆಗೆ ಆಗಮಿಸಿದ ಮಹಿಳೆ ನಿರ್ವಾಹಕನ ವಿರುದ್ಧ ದಾಖಲಿಸಿದ್ದ ಮಹಿಳೆ ಜೊತೆ ಅಸಭ್ಯ ವರ್ತನೆ ದೂರನ್ನು ವಾಪಸ್ ಪಡೆದಿದ್ದಾರೆ. ಈ ಮೂಲಕ ನಿರ್ವಾಹಕನ ವಿರುದ್ಧ ದಾಖಲಾಗಿದ್ದ ಪೋಕ್ಸೊ ಕಾಯ್ದೆಯ ಪ್ರಕರಣವನ್ನು ಕೈಬಿಡಲಾಗಿದೆ.
ಈ ವೇಳೆ ಯುವತಿಯ ತಾಯಿ ವೀಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದು, ನಾವು ಮರಾಠಿಗರೇ ಆಗಿದ್ದರೂ ನಾವೂ ಸಹ ಕನ್ನಡಿಗರೇ ಆಗಿದ್ದೇವೆ. ಈ ಜಗಳವನ್ನು ಕನ್ನಡ, ಮರಾಠಿ ಜಗಳ ಮಾಡಲಾಗುತ್ತಿದೆ ಎಂದು ಮನವಿ ಮಾಡಿದ್ದಾರೆ.
ಟಿಕೆಟ್ ಕೊಡುವಾಗ ಮರಾಠಿ ಬರಲ್ಲ, ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ಯುವಕರ ಗುಂಪೊಂದು ಬೆಳಗಾವಿ ತಾಲೂಕಿನ ಸುಳೇಬಾವಿ ಬಾಳೇಕುಂದ್ರಿ ಗ್ರಾಮದ ಬಳಿ ಹಲ್ಲೆ ನಡೆಸಿದೆ. ಬಸ್‌ನಲ್ಲಿದ್ದ ಯುವತಿ, ಕಂಡಕ್ಟರ್ ಮಹದೇವಗೆ ಟಿಕೆಟ್ ಕೊಡುವಂತೆ ಮರಾಠಿಯಲ್ಲಿ ಹೇಳಿದ್ದಾಳೆ.
ಯುವತಿಯೊಂದಿಗೆ ಯುವಕನೊಬ್ಬ ಪ್ರಯಾಣ ಮಾಡುತ್ತಿದ್ದರಿಂದ ಎರಡು ಟಿಕೆಟ್ ಕೇಳಿದ್ದಾಳೆ. ಮರಾಠಿ ಬರುವುದಿಲ್ಲ ನನಗೆ ಕನ್ನಡದಲ್ಲಿ ಹೇಳುವಂತೆ ಕಂಡಕ್ಟರ್ ಹೇಳಿದ್ದಾನೆ. ಅದಕ್ಕಾಗಿ ಜನರನ್ನು ಕರೆಸಿ ಚಲಿಸುತ್ತಿರುವ ಬಸ್ ನಿಲ್ಲಿಸಿ ಹಲ್ಲೆ ಮಾಡಿಸಿದ್ದರು. ಬಳಿಕ ಕಂಡಕ್ಟರ್ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿದ್ದರು.
ಸಣ್ಣ ವಿಚಾರವನ್ನು ಕನ್ನಡಿಗರು- ಮರಾಠಿಗರು ಎಂದು ಜಗಳ ಬಿಂಬಿಸಿ ದೊಡ್ಡದು ಮಾಡಲಾಗುತ್ತಿದೆ. ಕೂಡಲೇ ಈ ಜಗಳ ನಿಲ್ಲಿಸಿ ಎಂದು ಮಹಿಳೆ ಮನವಿ ಮಾಡಿದ್ದಾರೆ.
ಕರ್ನಾಟಕದ ಬಸ್ ಚಾಲಕರು, ನಿರ್ವಾಹಕರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಗೂಂಡಾ ಕಾಯ್ದೆ ಹಾಕ್ಬೇಕು ಎಂದು ಸಚಿವ ರಾಮಲಿಂಗಾ ರೆಡ್ಡಿ ಅಧಿಕಾರಿಗಳಿಗೆ ಸೋಮವಾರ ತಾಕೀತು ಮಾಡಿದ್ದರು. ನಿರ್ವಾಹಕ ಮಹದೇವಪ್ಪ ಪರವಾಗಿ ನಮ್ಮ ಇಲಾಖೆ ಇದೆ. ಸಾರ್ವಜನಿಕರೂ ಇದ್ದಾರೆ ಎಂದು ಧೈರ್ಯ ತುಂಬಿದ್ದರು.
ಈ ಘಟನೆ ಬೆನ್ನಲ್ಲೇ ಶಿವಸೇನೆಯವರು ಕರ್ನಾಟಕದ ಬಸ್ ಗೆ ಹಾಗೂ ನಿರ್ವಾಹಕರಿಗೆ ಮಸಿ ಬಳಿದು ಪ್ರಕರಣ ಮತ್ತಷ್ಟು ತೀವ್ರಗೊಳ್ಳುವಂತೆ ಮಾಡಿದರು. ಇದಕ್ಕೆ ಪ್ರತಿಯಾಗಿ ಕನ್ನಡಪರ ಸಂಘಟನೆಗಳು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೆಳಗಾವಿಯಲ್ಲಿಂದು ಪ್ರತಿಭಟನೆ ನಡೆಸಿದರು.