ಡೆಹ್ರಾಡೂನ್: ದೇವಪ್ರಯಾಗ, ಹರಿದ್ವಾರ ಮತ್ತು ಹೃಷಿಕೇಶ್ ಗಳ ಮೂಲಕ ಗಂಗಾನದಿ ಮಲೀನವಾಗಿದ್ದು, ಮೈಕ್ರೊಪ್ಲಾಸ್ಟಿಕ್ ಕಣಗಳು ಕಂಡು ಬಂದಿರುವುದು ಸಂಶೋಧಕರ ಸ್ಫೋಟಕ ವರದಿ ಹೇಳಿದೆ.
ಗಂಗಾ ನದಿಯ ಉಗಮ ಸ್ಥಳದ ಮೇಲ್ಭಾಗದಲ್ಲಿ ಸಹ ಗಂಭೀರವಾದ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯವನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ನದಿಯ ವ್ಯಾಪಕ ನಾಶದ ಸ್ಥಿತಿಯನ್ನು ಹೊಸ ಪುರಾವೆಗಳು ಬಹಿರಂಗಪಡಿಸುತ್ತವೆ. ದೇವಪ್ರಯಾಗ ಮತ್ತು ಹರಿದ್ವಾರ ನಡುವಿನ ಪ್ರದೇಶದ ಮಾದರಿಗಳಲ್ಲಿಯೂ ಸಹ ಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್ ಕಣಗಳು ಇರುವುದು ದೃಢಪಟ್ಟಿದೆ.
ದೇವಪ್ರಯಾಗದಲ್ಲಿ ನೀರಿನಲ್ಲಿ ಸರಾಸರಿ ಮೈಕ್ರೋಪ್ಲಾಸ್ಟಿಕ್ ಸಾಂದ್ರತೆಯು ಪ್ರತಿ ಲೀಟರ್‌ಗೆ 325 ಕಣಗಳು, ಹೃಷಿಕೇಶದಲ್ಲಿ 822 ಕಣಗಳು ಮತ್ತು ಹರಿದ್ವಾರದಲ್ಲಿ 1300 ಕಣಗಳಿವೆ.
ಮೂರು ಪಟ್ಟಣಗಳ ನಡುವಿನ 19 ಸ್ಥಳಗಳಿಂದ ಬಂದ ಎಲ್ಲಾ ನೀರಿನ ಮಾದರಿಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಸಾಂದ್ರತೆಯು ಲೀಟರ್‌ಗೆ 175 ಕಣಗಳಿಗಿಂತ ಹೆಚ್ಚಾಗಿತ್ತು.
ದೇವಪ್ರಯಾಗದ ಬಳಿಯ ಮೊದಲ ಎರಡು ತಾಣಗಳು ಮಾತ್ರ 150ಕ್ಕಿಂತ ಕಡಿಮೆ ವರ್ಗದಲ್ಲಿವೆ. ಆದಾಗ್ಯೂ, ಇತರ ಎಲ್ಲಾ ತಾಣಗಳು ಅಪಾಯಕಾರಿ ವರ್ಗದಲ್ಲಿ 1200 ಮೀರಿದೆ.
ನೀರಿನಲ್ಲಿರುವ ಮೈಕ್ರೋಪ್ಲಾಸ್ಟಿಕ್‌ಗಳಲ್ಲಿ ಪಾಲಿಥಿಲೀನ್, ಪಾಲಿಮೈಡ್, ಪಾಲಿಸ್ಟೈರೀನ್, ಪಾಲಿವಿನೈಲ್ ಕ್ಲೋರೈಡ್, ಪಾಲಿಥಿಲೀನ್ ಟೆರೆಫ್ಥಲೇಟ್, ಪಾಲಿಪ್ರೊಪಿಲೀನ್ ಮತ್ತು ಪಾಲಿಕಾರ್ಬೊನೇಟ್ ಇರುವುದು ಸಂಶೋಧನೆಯಲ್ಲಿ ಕಂಡುಬಂದಿವೆ.
“ಗಂಗಾ ನದಿಯ ಮೂಲದಲ್ಲಿ ಪ್ರವಾಸೋದ್ಯಮ, ಸಾಹಸ ಶಿಬಿರಗಳು, ತೀರ್ಥಯಾತ್ರೆಗಳು ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ಕಳಪೆ ನಿರ್ವಹಣೆಯ ಪರಿಣಾಮಗಳನ್ನು ನಾವು ನೋಡಿದ್ದೇವೆ” ಎಂದು ಅಧ್ಯಯನದ ಮೇಲ್ವಿಚಾರಣೆ ವಹಿಸಿದ್ದ ಡೂನ್ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಮತ್ತು ನೈಸರ್ಗಿಕ ಸಂಪನ್ಮೂಲಗಳ ಪ್ರಾಧ್ಯಾಪಕ ಸುರೇಂದ್ರ ಸುತಾರ್ ಹೇಳಿದರು.
ಸುತಾರ್ ಜೊತೆಗೆ, ಸಂಶೋಧನಾ ವಿದ್ವಾಂಸರಾದ ಮನೀಶ್ ಚೌಧರಿ ಮತ್ತು ಸುಮನ್ ರಾವತ್ ಅವರು ಕ್ಷೇತ್ರ ಸಮೀಕ್ಷೆಗಳನ್ನು ನಡೆಸಿ ವರದಿ ನೀಡಿದ್ದಾರೆ. ನದಿ ದಂಡೆಯಲ್ಲಿ ಹಲವಾರು ತ್ಯಾಜ್ಯ ವಿಲೇವಾರಿ ಸ್ಥಳಗಳು, ಮನರಂಜನಾ ಚಟುವಟಿಕೆಗಳಿಗಾಗಿ ಗೊತ್ತುಪಡಿಸಿದ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಅವಶೇಷಗಳು ಮತ್ತು ಒಳಚರಂಡಿ ಸಂಸ್ಕರಣಾ ಬಿಂದುಗಳನ್ನು ಅವರು ಗಮನಿಸಿದರು.
ಅವರು ತಮ್ಮ ಸಂಶೋಧನೆಗಳನ್ನು ‘ಸೈನ್ಸ್ ಆಫ್ ದಿ ಟೋಟಲ್ ಎನ್ವಿರಾನ್ಮೆಂಟ್’ ಎಂಬ ಸಂಶೋಧನಾ ಜರ್ನಲ್‌ನಲ್ಲಿ ಪ್ರಕಟಿಸಿದ್ದಾರೆ. ಆಧ್ಯಾತ್ಮಿಕ ಆಚರಣೆಗಳ ಭಾಗವಾಗಿ ನದಿ ದಂಡೆಗಳಲ್ಲಿ ಸಾಮೂಹಿಕ ಸ್ನಾನವು ಮಾನ್ಸೂನ್ ಪೂರ್ವದಲ್ಲಿ ಮೈಕ್ರೋಪ್ಲಾಸ್ಟಿಕ್ ಹೊರೆಗೆ ಕೊಡುಗೆ ನೀಡುತ್ತದೆ’ ಎಂದು ಅವರು ಬರೆದಿದ್ದಾರೆ.