ಕಳೆದ ವರ್ಷ ಕೇಂದ್ರ ಚುನಾವಣಾ ಆಯೋಗದ ಚುನಾವಣಾಧಿಕಾರಿ ಆಗಿ ನೇಮಕಗೊಂಡಿದ್ದ ಜ್ಞಾನೇಶ್ ಕುಮಾರ್ ಇದೀಗ ಮುಖ್ಯ ಚುನಾವಣಾಧಿಕಾರಿಯಾಗಿ ನೇಮಕಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜೀವ್ ಕುಮಾರ್ ತೆರವುಗೊಳಿಸಲಿರುವ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸ್ಥಾನವನ್ನು ಜ್ಞಾನೇಶ್ ಕುಮಾರ್ ನೇಮಕಗೊಳ್ಳಲಿದ್ದು, ಬಿಹಾರ ವಿಧಾನಸಭಾ ಚುನಾವಣೆ ಅವರ ನೇತೃತ್ವದಲ್ಲಿ ನಡೆಯಲಿರುವ ಮೊದಲ ಚುನಾವಣೆ ಆಗಲಿದೆ. ಮುಂದಿನ ವರ್ಷ ಇವರ ನೇತೃತ್ವದಲ್ಲಿಯೇ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತಮಿಳುನಾಡು ರಾಜ್ಯಗಳ ಚುನಾವಣೆ ನಡೆಯಲಿದೆ.
ಕೇರಳ ಮೂಲದ ಜ್ಞಾನೇಶ್ ಕುಮಾರ್ 1988ರ ಐಎಎಸ್ ಬ್ಯಾಚ್ ಆಗಿದ್ದಾರೆ. ರಾಜೀವ್ ಕುಮಾರ್ ನೇತೃತ್ವದ ಮೂವರು ಚುನಾವಣಾಧಿಕಾರಿಗಳಲ್ಲಿ ಜ್ಞಾನೇಶ್ ಕುಮಾರ್ ಒಬ್ಬರಾಗಿದ್ದಾರೆ. ಉತ್ತರಾಖಂಡ್ ಮೂಲದ ಸುಕ್ಬೀರ್ ಸಿಂಗ್ ಮತ್ತೊಬ್ಬ ಚುನಾವಣಾಧಿಕಾರಿ ಆಗಿದ್ದಾರೆ.
ಕೇಂದ್ರ ಗೃಹ ಸಚಿವಾಲಯದ ಭಾಗವಾಗಿದ್ದ 61 ವರ್ಷದ ಜ್ಞಾನೇಶ್ ಕುಮಾರ್, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿವಾದ ಕುರಿತು ಸುಪ್ರೀಂಕೋರ್ಟ್ ನಲ್ಲಿ ದಾಖಲೆಗಳ ನಿರ್ವಹಣೆ ಮಾಡಿದ್ದರು.
ಅಲ್ಲದೇ 2019 ಆಗಸ್ಟ್ ನಲ್ಲಿ ಜಮ್ಮು ಕಾಶ್ಮೀರವನ್ನು ಎರಡು ವಿಭಾಗವಾಗಿ ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿದ್ದೂ ಅಲ್ಲದೇ 370ನೇ ವಿಧಿ ರದ್ದು ಮಾಡುವಲ್ಲಿ ಪ್ರಮುಖವಾದ ಮಸೂದೆಗೆ ಕರಡು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರವನ್ನು ಜ್ಞಾನೇಶ್ ವಹಿಸಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪರಮಾಪ್ತರಾಗಿರುವ ಜ್ಞಾನೇಶ್ ಕುಮಾರ್, ಕಳೆದ ವರ್ಷ ಕೋ-ಅಪರೇಟಿವ್ ಸಚಿವಾಲಯದಲ್ಲಿ ನಾಗರಿಕ ಸೇವೆಯಿಂದ ನಿವೃತ್ತಿ ಹೊಂದಿದ್ದರು. ಅಲ್ಲದೇ ಸಂಸದೀಯ ಸಚಿವಾಲಯದಲ್ಲಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.