ಡೆತ್ ನೋಟ್ ಬರದಿಟ್ಟು ವ್ಯಕ್ತಿಯೊಬ್ಬ ತಾಯಿ, ಪತ್ನಿ ಹಾಗೂ ಮಗನನ್ನು ವಿಷ ಹಾಕಿ ಕೊಂದು ನಂತರ ತಾನು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ವಿಶ್ವೇಶ್ವರಯ್ಯನಗರದ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ಹಾಸನದ ಗೊರೂರು ಮೂಲದ ಚೇತನ್ (45), ಕುಶಾಲ್ (15), ರೂಪಾಲಿ (43) ಮತ್ತು ಪ್ರಿಯಂವಧಾ (62) ಶವಗಳು ಪತ್ತೆಯಾಗಿವೆ.
ಚೇತನ್ ತಾಯಿ ಪ್ರಿಯಂವಧಾ, ಪತ್ನಿ ರೂಪಾಲಿ ಮತ್ತು ಮಗ ಕುಶಾಲ್ಗೆ ವಿಷಹಾಕಿ ಕೊಂದ ನಂತರ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಚೇತನ್ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಡೆತ್ ನೋಟ್ ಬರೆದಿಟ್ಟಿದ್ದು, ಹಣಕಾಸಿನ ಸಮಸ್ಯೆಯಿಂದ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇದಕ್ಕೆ ಯಾರೂ ಕಾರಣರಲ್ಲ. ನಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕಿರುಕುಳ ಕೊಡಬೇಡಿ ಎಂದು ಬರೆಯಲಾಗಿದೆ.
ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಡಿಸಿಪಿ ಜಾಹ್ನವಿ, ವಿದ್ಯಾರಣ್ಯಪುರಂ ಇನ್ಸ್ಪೆಕ್ಟರ್ ಮೋಹಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೇತನ್ ಕುಟುಂಬ ಹಾಗೂ ಚೇತನ್ ತಾಯಿ ಪ್ರಿಯಂವಧಾ ಅಕ್ಕಪಕ್ಕದ ಫ್ಲ್ಯಾಟ್ನಲ್ಲಿ ವಾಸವಿದ್ದರು. ತಾಯಿ ಪ್ರಿಯಂವಧಾ ಮತ್ತು ಮಗ ಚೇತನ್ ಕುಟುಂಬ ಒಟ್ಟಾಗಿ ಭಾನುವಾರ ಗೊರೂರು ದೇವಸ್ಥಾನಕ್ಕೆ ಹೋಗಿ ಸಂಜೆ ಮನೆಗೆ ಬಂದಿದ್ದರು.
ಚೇತನ್ ಕಾರ್ಮಿಕರನ್ನು ಸೌದಿಗೆ ಕಳಿಸುವ ಕೆಲಸ ಮಾಡುತ್ತಿದ್ದರು. ಚೇತನ್ ಪತ್ನಿ ರೂಪಾಲಿ ಮೈಸೂರಿನ ನಿವಾಸಿಯಾಗಿದ್ದು, 2019 ರಿಂದ ಚೇತನ್ ಮತ್ತು ರೂಪಾಲಿ ಮೈಸೂರಿನಲ್ಲೇ ನೆಲೆಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದ್ದಾರೆ.