Bird flu ಚಿಕ್ಕಬಳ್ಳಾಪುರ ನಂತರ ಬಳ್ಳಾರಿಯಲ್ಲಿ ಹಕ್ಕಿಜ್ವರ ಪತ್ತೆ; ರಾಯಚೂರಿನಲ್ಲಿ ಅಲರ್ಟ್!

ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಇದೀಗ ಬಳ್ಳಾರಿಯಲ್ಲೂ ಕೋಳಿಗಳಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದ ಹಕ್ಕಿಜ್ವರ ಒಂದರ ನಂತರ ಮತ್ತೊಂದು ಎಂಬಂತೆ ವಿವಿಧ ಜಿಲ್ಲೆಗಳಿಗೆ ಹರಡುವ ಭೀತಿ ಎದುರಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ವರದಹಳ್ಳಿ ಗ್ರಾಮದ ಎರಡು ಮನೆಗಳಲ್ಲಿ ಸಂತೆಯಿಂದ ತಂದು ಸಾಕಿದ್ದ 16 ಕೋಳಿಗಳಲ್ಲಿ ಹಕ್ಕಿಜ್ವರ ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ 2 ಸಾವಿರಕ್ಕೂ ಅಧಿಕ ಕೋಳಿಗಳನ್ನು ಕೊಲ್ಲಲಾಗಿತ್ತು.

ಇದೀಗ ಚಿಕ್ಕಬಳ್ಳಾಪುರ ಪಕ್ಕದ ಜಿಲ್ಲೆಯಾದ ಬಳ್ಳಾರಿ ಜಿಲ್ಲೆಯ ಸಂಡೂರ ತಾಲೂಕಿನ ಕುರೇಕುಪ್ಪ ಗ್ರಾಮದ ಬಳಿಯ ಸರ್ಕಾರಿ ಪಾಲ್ಟ್ರಿ ಪಾರ್ಮನಲ್ಲಿನ 2400 ಕೋಳಿಗಳು ಹಕ್ಕಿಜ್ವರದಿಂದ ಮೃತಪಟ್ಟಿರುವುದು ದೃಢಪಟ್ಟಿದೆ.

ಜಿಲ್ಲಾಧಿಕಾರಿ ಪ್ರಶಾಂತ್​ ಕುಮಾರ್ ಮಿಶ್ರಾ ಶನಿವಾರ ಈ ವಿಷಯ ತಿಳಿಸಿದ್ದು, ಫೆಬ್ರವರಿ 21 ರಿಂದ ಇಲ್ಲಿಯವರೆಗೆ ಹಂತ ಹಂತವಾಗಿ 2400 ಕೋಳಿಗಳ ಮೃತಪಟ್ಟಿವೆ ಎಂದರು.

ಸತ್ತ ಕೋಳಿಗಳ ಮಾದರಿ ಸಂಗ್ರಹಿಸಿ ಮಧ್ಯಪ್ರದೇಶದ ಭೂಪಾಲ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಪ್ ಹೈ ಸೆಕ್ಯೂರಿಟಿ ಅನಿಮಲ್ ದಿಸೀಸ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪ್ರಯೋಗಾಲಯದ ವರದಿ ಬಂದ ಬಳಿಕ ಕೋಳಿಗಳಲ್ಲಿ ಹಕ್ಕಿ ಜ್ವರ ಇರುವುದು ದೃಢಪಟ್ಟಿತು. ಆಂಧ್ರಪ್ರದೇಶ, ತೆಲಂಗಾಣದಿಂದ ಸೋಂಕು ಹರಡಿರುವ ಸಾಧ್ಯತೆ ಇದೆ ಎಂದು ಅವರು ವಿವರಿಸಿದರು.

ಹಕ್ಕಿ ಜ್ವರ ದೃಢ ಹಿನ್ನೆಲೆಯಲ್ಲಿ ಬಳ್ಳಾರಿ ಜನರು ಆತಂಕಗೊಂಡಿದ್ದಾರೆ. ಇನ್ನು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಜಿಲ್ಲೆಯಲ್ಲಿ ಅಗತ್ಯ ಕ್ರಮ ಕೈಗೊಂಡಿದೆ. ಕುರೇಕುಪ್ಪ ಗ್ರಾಮದ ಸುತ್ತಲಿನ ಒಂದು ಕಿಮೀ ದೂರವನ್ನ ಅಪಾಯಕಾರಿ ವಲಯ ಎಂದು ಗುರುತು ಮಾಡಲಾಗಿದೆ. ತೋರಣಗಲ್ಲು, ಕುರೆಕುಪ್ಪ, ವಡ್ಡು, ತಾಳೂರು, ಬಸಾಪುರ, ದರೋಜಿ, ದೇವಲಾಪುರ ಗ್ರಾಮಗಳು ಸೇರಿದಂತೆ 10 ಕಿಮೀ ವ್ಯಾಪ್ತಿಯ ಪ್ರದೇಶವನ್ನ ಕಣ್ಣಗಾವಲು ವಲಯ ಎಂದು ಗುರುತು ಮಾಡಲಾಗಿದೆ.

ರಾಯಚೂರಿನಲ್ಲೂ ಅಲರ್ಟ್​

ರಾಯಚೂರಿನಲ್ಲಿ ಪಕ್ಷಿಗಳು ನಿಗೂಢವಾಗಿ ಸಾವನಪ್ಪುತ್ತಿರುವ ಹಿನ್ನೆಲೆಯಲ್ಲಿ  ಕೋಳಿ ಉತ್ಪನ್ನಗಳ ಮೇಲೆ ತೀವ್ರ ನಿಗಾ ವಹಿಸಲು ಜಿಲ್ಲಾಧಿಕಾರಿ ನಿತೀಶ್.ಕೆ ಆದೇಶ ಹೊರಡಿಸಿದ್ದಾರೆ.

ಪಶು ಸಂಗೋಪನಾ ಅಧಿಕಾರಿಗಳು ಕೋಳಿ ಫಾರ್ಮ್​ಗಳನ್ನು​ ಪರಿಶೀಲಿಸಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ  ಫಾರ್ಮ್ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಕೋಳಿ ಫಾರ್ಮ್ ಸುತ್ತಮುತ್ತ ಸ್ಯಾನಿಟೈಸರ್​ ಸಿಂಪಡಣೆಗೆ ಸೂಚಿಸಿದ್ದಾರೆ.

ಫಾರ್ಮ್ ಒಳಗಡೆ ಹೊಸ ವ್ಯಕ್ತಿ, ಕೋಳಿ ವಾಹನ ಪ್ರವೇಶಕ್ಕೆ ಅವಕಾಶ ನೀಡಬಾರದು. ಸ್ಯಾನಿಟೈಸರ್​ ಮಾಡಿದ ಬಳಿಕವೇ ಕೋಳಿ ಫಾರ್ಮ್ ಒಳಗೆ ಪ್ರವೇಶ ನೀಡಬೇಕೆಂದು ಸೂಚನೆ ನೀಡಿದ್ದಾರೆ.

Post a Comment

Previous Post Next Post