ಬೆಂಗಳೂರು: 6 ವರ್ಷದ ಮಗನ ಎದುರೇ ಪತ್ನಿ ಕೊಂದು ಪತಿ ಆತ್ಮಹತ್ಯೆ

ಅಸಹಜ ಲೈಂಗಿಕ ಕ್ರಿಯೆ ನಡೆಸುವ ವಿಷಯದಲ್ಲಿ ಉಂಟಾದ ಜಗಳದ ವೇಳೆ 6 ವರ್ಷದ ಮಗನ ಎದುರೇ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬ್ಯಾಡರಹಳ್ಳಿಯ ಕಾಳಿಕಾನಗರದಲ್ಲಿ ಮಹಾಶಿವರಾತ್ರಿ ದಿನವಾದ ಬುಧವಾರ ಬೆಳಿಗ್ಗೆ ಈ ದುರ್ಘಟನೆ ನಡೆದಿದ್ದು, ತುಮಕೂರಿನ ಗುಬ್ಬಿ ಮೂಲದ ಸುರೇಶ್ (40) ಪತ್ನಿ ಮಮತಾ (30) ಅವರನ್ನು ಕತ್ತು ಹಿಸುಕಿ ಕೊಂದು ನಂತರ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ದಂಪತಿ ನಡುವೆ ಪದೇಪದೇ ಜಗಳ ಆಗುತ್ತಿದ್ದು, ಕುಡಿದು ಬಂದು ಸುರೇಶ್ ಅಶ್ಲೀಲ ವೀಡಿಯೋ ತೋರಿಸಿ ವೀಡಿಯೋದಲ್ಲಿರುವಂತೆ ಅಸಹಜ ಲೈಂಗಿಕ ಕ್ರಿಯೆ ನಡೆಸಲು ಸಹಕರಿಸುವಂತೆ ಪತ್ನಿ ಜೊತೆ ಜಗಳ ಮಾಡುತ್ತಿದ್ದ.

ಬುಧವಾರ ಬೆಳಿಗ್ಗೆ ಕೂಡ ಇದೇ ವಿಷಯದಲ್ಲಿ ಜಗಳ ಉಂಟಾಗಿದ್ದು, 6 ವರ್ಷದ ಮಗನ ಮುಂದೆಯೇ ಹೆಂಡತಿಯನ್ನು ಕೊಲೆ ಮಾಡಿ ನಂತರ ತಾನೂ ನೇಣಿಗೆ ಶರಣಾಗಿದ್ದಾನೆ. ಕೂಡಲೇ ಹೊರಗೆ ಬಂದ ಮಗ ನೆರೆಹೊರೆಯವರಿಗೆ ವಿಷಯ ತಿಳಿಸಿದ್ದಾನೆ. ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.

ಅಸಹಜ ಲೈಂಗಿಕ ಕ್ರಿಯೆಗೆ ಒತ್ತಡ?

ತುಮಕೂರಿನ ಗುಬ್ಬಿ ತಾಲೂಕಿನ ಸಿ.ಎಸ್. ಪುರದ ನಿವಾಸಿ ಸುರೇಶ್ ಮತ್ತು ತುಮಕೂರು ಜಿಲ್ಲೆಯ ನಿಡುವಳ್ಳಿಯ ಮಮತಾ 13 ವರ್ಷಗಳ ಹಿಂದೆ ಮದುವೆ ಆಗಿದ್ದು, ಬೆಂಗಳೂರಿಗೆ ದಂಪತಿ ಕೆಲಸ ಅರಸಿ ಬಂದಿತ್ತು. ಸುರೇಶ್ ಆಟೋ ಓಡಿಸಿಕೊಂಡಿದ್ದರೆ, ಮಮತಾ ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಮೊಬೈಲ್ ಫೋನ್ನಲ್ಲಿ ವಿಡಿಯೋ ತೋರಿಸಿ ಅದರಲ್ಲಿರುವಂತೆ ಅಸಹಜ ಲೈಂಗಿಕ ಕ್ರಿಯೆ ನಡೆಸುವಂತೆ ಸುರೇಶ್ ಪದೇಪದೆ ಒತ್ತಾಯಿಸುತ್ತಿದ್ದ. ಈ ವಿಷಯದಲ್ಲಿ ಇಬ್ಬರ ನಡುವೆ ಪದೇಪದೆ ಜಗಳ ಆಗುತ್ತಿತ್ತು. ಈ ವಿಚಾರವಾಗಿ ಕಳೆದ ಎರಡು ದಿನಗಳ ಹಿಂದೆ ದಂಪತಿ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಎರಡೂ ಕಡೆ ಮನೆಯವರು ಮಾತಾಡಿ ವಿಚ್ಚೇಧನ ಪಡೆದುಕೊಳ್ಳಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ.

Post a Comment

Previous Post Next Post