ಕುಂಭದ ಸುಳ್ಳು ಮಾಹಿತಿ: 53 ಸಾಮಾಜಿಕ ತಾಣಗಳು ಬಂದ್

ನವದೆಹಲಿ: ಮಹಾಕುಂಭ ಮೇಳದ ಬಗ್ಗೆ ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ 53 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

ನಕಲಿ ಸುದ್ದಿಗಳನ್ನು ನಿಗ್ರಹಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಹಳೆಯ ವೀಡಿಯೊಗಳು ಸೇರಿದಂತೆ ಅನೇಕ ದಾರಿತಪ್ಪಿಸುವ ಪೋಸ್ಟ್ಗಳನ್ನು ಗುರುತಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹರಡಿದ ಪೋಸ್ಟ್ಗಳ ಮೇಲ್ವಿಚಾರಣೆ ಮಾಡಲು ಮತ್ತು ಕ್ರಮ ಕೈಗೊಳ್ಳಲು ಉತ್ತರ ಪ್ರದೇಶ ಪೊಲೀಸರು ಮತ್ತು ತಜ್ಞ ಸಂಸ್ಥೆಗಳಿಂದ ನಿರಂತರ ಸೈಬರ್ ಗಸ್ತು ನಡೆಸಲಾಗುತ್ತಿದೆ ಎಂದು ಡಿಜಿಪಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

ಫೆಬ್ರವರಿ 13 ರಂದು, ಸೈಬರ್ ಮೇಲ್ವಿಚಾರಣೆಯಲ್ಲಿ ಮಹಾ ಕುಂಭ ಮೇಳಕ್ಕೆ ತಪ್ಪಾಗಿ ಲಿಂಕ್ ಮಾಡಲಾದ ಎರಡು ದಾರಿತಪ್ಪಿಸುವ ವಿಡಿಯೋಗಳು ಪತ್ತೆಯಾಗಿವೆ.

ಈಜಿಪ್ಟಲ್ಲಿ ನಡೆದ ಬೆಂಕಿ ಅವಘಡದ ವಿಡಿಯೋವನ್ನು ಮಹಾಕುಂಭ ಬಸ್ ನಿಲ್ದಾಣದಲ್ಲಿ ಬೆಂಕಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದ್ದು, 40-50 ವಾಹನಗಳು ನಾಶವಾಗಿವೆ ಎಂದು ಹೇಳಲಾಗಿದೆ. ತನಿಖೆಯ ನಂತರ ಈ ದೃಶ್ಯಗಳು ವಾಸ್ತವವಾಗಿ ಕೈರೋದಲ್ಲಿ ಜುಲೈ 14, 2020ರಂದು ಸಂಭವಿಸಿದ ಅಗ್ನಿ ಅವಘಡದ ದೃಶ್ಯಗಳಾಗಿದ್ದವು ಎಂದು ಅವರು ತಿಳಿಸಿದ್ದಾರೆ.

ಪ್ರಯಾಗರಾಜ್ ಕುಂಭಮೇಳ ಆಡಳಿತ ಮತ್ತು ಉತ್ತರ ಪ್ರದೇಶ ಪೊಲೀಸರು ತಪ್ಪು ಮಾಹಿತಿಯನ್ನು ಹರಡಲು ಕಾರಣರಾದ ಹಲವು ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

Post a Comment

Previous Post Next Post