ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಸಂಸ್ಥೆಯ ಬಸ್ ಮರಕ್ಕೆ ಢಿಕ್ಕಿ ಹೊಡೆದು ವಿದ್ಯಾರ್ಥಿಗಳು ಸೇರಿದಂತೆ 25 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕುಂದನಹಳ್ಳಿ ಗೇಟ್ ಬಳಿ ಗುರುವಾರ ಬೆಳಗ್ಗೆ ಸಂಭವಿಸಿದೆ.
ಘಟನೆಯಲ್ಲಿ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಉಳಿದವರಿಗೆ ಕೈ, ಕಾಲು ಮುರಿದಿದೆ. ತೀವ್ರವಾಗಿ ಗಾಯಗೊಂಡವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸೇರಿಸಲಾಗಿದ್ದು, ಉಳಿದವರನ್ನು ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೇಮಗಿರಿ ರಸ್ತೆಯಲ್ಲಿ ಆಲೇನಹಳ್ಳಿ ಗ್ರಾಮದಿಂದ ಕೆ.ಆರ್.ಪೇಟೆಗೆ ಆಗಮಿಸುತ್ತಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಪಕ್ಕದ ಮರಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬಸ್ ಎಡಭಾಗ ನಜ್ಜುಗುಜ್ಜಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರ ಸಹಕಾರದಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ.ಆರ್.ಪೇಟೆ ತಾಲೂಕಿನ ಹೇಮಗಿರಿ ನಾಟನಹಳ್ಳಿಯ ಪ್ರೇಕ್ಷಿತ (14), ಮಲ್ಲೇನಹಳ್ಳಿ ನಿಂಗಮ್ಮ(70), ಆಲೇನಹಳ್ಳಿ ಬಿಂದು (30), ನಾರ್ಗೋನಹಳ್ಳಿ ಶಿವಮ್ಮ(50), ಹೊನ್ನೇನಹಳ್ಳಿ ದೇವರಾಜು (40), ಮಡವಿನಕೋಡಿಯ ಕಿರಣ್ (38) ಗಾಯಗೊಂಡಿದ್ದಾರೆ.
ಎಚ್ ಡಿಕೆ ಆಘಾತ
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕುಂದನಹಳ್ಳಿ ಗೇಟ್ ಬಳಿ ಸಂಭವಿಸಿರುವ ರಾಜ್ಯ ಸಾರಿಗೆ ಬಸ್ ಅಪಘಾತದಲ್ಲಿ ಶಾಲಾ ಮಕ್ಕಳು ಸೇರಿ ಇಪ್ಪತ್ತೈದಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಸುದ್ದಿ ತಿಳಿದು ತೀವ್ರ ಆಘಾತ ಉಂಟಾಯಿತು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಪಡೆಯುತ್ತಿದ್ದಂತೆ ತಕ್ಷಣವೇ ಜಿಲ್ಲಾ ವೈದ್ಯಾಧಿಕಾರಿಗಳ ಜತೆ ಮಾತನಾಡಿ, ಸಮಗ್ರ ಮಾಹಿತಿ ಪಡೆದುಕೊಂಡಿದ್ದೇನೆ ಹಾಗೂ ಗಾಯಾಳುಗಳಿಗೆ ಅಗತ್ಯವಾದ, ಉಚಿತ, ಗುಣಮಟ್ಟದ ತುರ್ತುಚಿಕಿತ್ಸೆ ನೀಡಬೇಕು ಎಂದು ಸೂಚಿಸಿದ್ದೇನೆ. ಗಾಯಾಳುಗಳೆಲ್ಲರೂ ಆದ? ಶೀಘ್ರವಾಗಿ ಚೇತರಿಸಿಕೊಂಡು ಕ್ಷೇಮವಾಗಿ ಮನೆಗೆ ಮರಳಲಿ ಹಾರೈಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.