ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ನಿಯಮಗಳಿಗೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಅಲ್ಲೋಲ ಕಲ್ಲೋಲ ಉಂಟಾಗಿದ್ದು, ಇತಿಹಾಸದಲ್ಲೇ ಕನಿಷ್ಠ ಮೊತ್ತಕ್ಕೆ ನಿಫ್ಟಿ ಕುಸಿತ ಕಂಡಿದೆ.
ಕಳೆದ ಕೆಲವು ವಾರಗಳಿಂದ ಸತತವಾಗಿ ಕುಸಿಯುತ್ತಿರುವ ಷೇರು ಮಾರುಕಟ್ಟೆ ಶುಕ್ರವಾರ ದಾಖಲೆ ಮಟ್ಟದಲ್ಲಿ ಕುಸಿತ ಕಂಡಿದೆ. ಒಂದೇ ದಿನದಲ್ಲಿ ಸೆನ್ಸೆಕ್ಸ್ ಶೇ.1.90ರಷ್ಟು ಹಾಗೂ ನಿಫ್ಟಿ ಶೇ. 1.86ರಷ್ಟು ಇಳಿಕೆ ದಾಖಲಿಸಿದೆ.
ಸೆನ್ಸೆಕ್ಸ್ ಶೇ.1.90ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ1.86ರಷ್ಟು ಇಳಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಬರೊಬ್ಬರಿ 1,414.33ಅಂಕಗಳ ಕುಸಿತದೊಂದಿಗೆ 73,198.10 ಅಂಕಗಳಿಗೆ ಕುಸಿತವಾಗಿದ್ದರೆ, ನಿಫ್ಟಿ 420.35 ಅಂಕಗಳ ಇಳಿಕೆಯೊಂದಿಗೆ 22,124.70 ಅಂಕಗಳಿಗೆ ಕುಸಿತವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಸೆನ್ಸಕ್ 1400 ಅಂಕಗಳಷ್ಟು ಕುಸಿತ ಕಂಡಿದ್ದರಿಂದ ಬಂಡವಾಳ ಹೂಡಿಕೆದಾರರು ಒಂದೇ ದಿನದಲ್ಲಿ ಸರಿ ಸುಮಾರು 10 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ.
ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ‘ರೆಡ್’ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ನಿಫ್ಟಿ ಭಾರತೀಯ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಎರಡನೇ ಅತೀ ದೊಡ್ಡ ಕುಸಿತದ ದಾಖಲೆ ಬರೆದಿದೆ.
ನಿಫ್ಟಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ತಿಂಗಳುಗಳವರೆಗೆ 6 ಬಾರಿ ದೀರ್ಘಕಾಲದ ಕುಸಿತ ಅನುಭವಿಸಿದ್ದು ಇದೇ ಮೊದಲಾಗಿದೆ. ಈ ಹಿಂದೆ ಸೆಪ್ಟೆಂಬರ್ 1994 ರಿಂದ ಏಪ್ರಿಲ್ 1995 ರವರೆಗೆ ಅತ್ಯಂತ ದೀರ್ಘಕಾಲದ ನಷ್ಟದ ಸರಣಿ ಸಂಭವಿಸಿತ್ತು.
ಸೂಚ್ಯಂಕವು ಸತತ 8 ತಿಂಗಳಲ್ಲಿ ಶೇ.31.4ರಷ್ಟು ಕುಸಿದಿದೆ. 1996 ರಲ್ಲಿ ಪ್ರಾರಂಭವಾದ ನಂತರದ ಅತಿ ದೀರ್ಘವಾದ ಕುಸಿತ ಇದಾಗಿದೆ. ಇದರಿಂದ ಹೂಡಿಕೆದಾರರು ಒಟ್ಟಾರೆ 93.65 ಲಕ್ಷ ಕೋಟಿ ನಷ್ಟ ಅನುಭವಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ 27 ರಂದು ದಾಖಲಾಗಿದ್ದ 85,978.25 ರ ದಾಖಲೆಯ ಗರಿಷ್ಠ ಮಟ್ಟದಿಂದ, ಬಿಎಸ್ಇ ಸೂಚ್ಯಂಕ ಬರೊಬ್ಬರಿ 12,780.15 ಪಾಯಿಂಟ್ ಗಳು ಅಥವಾ ಶೇ.14.86 ಪ್ರತಿಶತ ಕುಸಿದಿದೆ. ನಿಫ್ಟಿ ಸೆಪ್ಟೆಂಬರ್ 27, 2024 ರಂದು ದಾಖಲಾಗಿದ್ದ 26,277.35 ರ ಜೀವಮಾನದ ಗರಿಷ್ಠ ಮಟ್ಟದಿಂದ 4,152.65 ಅಂಕಗಳು ಅಥವಾ 15.80 ಪ್ರತಿಶತದಷ್ಟು ಕುಸಿದಿದೆ.