ರಾಜ್ಯದ 11 ಸಾವಿರ ಕೋಟಿ ಮೊತ್ತದ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ: ಡಿಕೆ ಶಿವಕುಮಾರ್

ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ 11 ಸಾವಿರ ಕೋಟಿ ಮೊತ್ತದ ರಾಜ್ಯದ ವಿವಿಧ ನೀರಾವರಿ ಯೋಜನೆಗಳ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಸ್ಥಾನದ ಉದಯಪುರದಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯದಿಂದ ಆಯೋಜಿಸಲಾಗಿದ್ದ ಸಮ್ಮೇಳನದಲ್ಲಿ ನಮ್ಮ ರಾಜ್ಯದ ನೀರಾವರಿ ಯೋಜನೆಗಳ ವಿಚಾರವನ್ನು ಪ್ರಸ್ತಾಪ ಮಾಡಿದ್ದೆ. ಈ ವಿಚಾರವಾಗಿ ಜಲಶಕ್ತಿ ಸಚಿವರ ಬಳಿಯೂ ವೈಯಕ್ತಿಕವಾಗಿ ಈ ವಿಚಾರ ಪ್ರಸ್ತಾಪಿಸಿದ್ದೆವು. ನಂತರ ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ರಾಜ್ಯದ ಎಲ್ಲಾ ಅಧಿಕಾರಿಗಳ ಸಭೆ ಮಾಡಿದೆವು”ಎಂದು ತಿಳಿಸಿದರು.

ಮೇಕೆದಾಟು ಯೋಜನೆ ಬಗ್ಗೆ ನಿಲುವು ಕೇಳಿದ್ದೇವೆ

ಮೇಕೆದಾಟು ಯೋಜನೆ ವಿಚಾರವಾಗಿ ಕೇಂದ್ರ ಸರ್ಕಾರದ ನಿಲುವೇನು ಎಂದು ತಿಳಿಸುವಂತೆ ಕೇಳಿದ್ದೇವೆ. ಈ ವಿಚಾರದಲ್ಲಿ ಸಮಯವ್ಯರ್ಥ ಮಾಡುವುದು ಬೇಡ. ಈ ಯೋಜನೆ ಮಾಡಲು ನೀವು ಬದ್ಧರಾಗಿದ್ದೀರಾ ಅಥವಾ ಇಲ್ಲವೇ? ಕೇಂದ್ರ ಜಲಶಕ್ತಿ ಸಚಿವಾಲಯ ನ್ಯಾಯದ ಸ್ಥಾನದಲ್ಲಿ ಕೂತಿದ್ದು, ಈ ಯೋಜನೆ ಬಗ್ಗೆ ನಿಲುವೇನು ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಳಿದ್ದೇವೆ. ಈ ಯೋಜನೆಯಿಂದ ಎರಡೂ ರಾಜ್ಯಗಳಿಗೆ ಉಪಯೋಗವಾಗಬೇಕು ಎಂದರು.

ಪೆನ್ನಾರ್ ನದಿ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡು ನಡುವೆ ತಿಕ್ಕಾಟವಿದ್ದು, ಸಂಧಾನದ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳಬಹುದೇ ಎಂದು ಕೇಳಿದ್ದೇವೆ. ಕಳೆದ ವರ್ಷ 300 ಟಿಎಂಸಿ, ಅದಕ್ಕೂ ಹಿಂದಿನ ವರ್ಷ 400 ಟಿಎಂಸಿ ನೀರು ಸಮುದ್ರಕ್ಕೆ ಸೇರಿದೆ. ಇದನ್ನು ನಾವು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ನವಲಿ ಅಣೆಕಟ್ಟು ವಿಚಾರವಾಗಿ ಆಂಧ್ರ ಸಿಎಂ ಜತೆ ಚರ್ಚೆ

ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಸುಮಾರು 30 ಟಿಎಂಸಿ ನೀರು ನಷ್ಟವಾಗುತ್ತಿದೆ. ಹೀಗಾಗಿ ನವಲಿ ಬಳಿ ಸಮಾನಾಂತರ ಅಣೆಕಟ್ಟು ನಿರ್ಮಾಣ ಮಾಡುವ ಯೋಜನೆ ಇದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸಚಿವರು ಹಾಗೂ ಅಧಿಕಾರಿಗಳ ಜತೆ ಪ್ರತ್ಯೇಕ ಸಭೆ ಮಾಡಲಾಯಿತು. ಅದನ್ನು ಕೇಂದ್ರ ಸಚಿವರ ಗಮನಕ್ಕೂ ತರಲಾಯಿತು. ಈ ಬಗ್ಗೆ ನೀವೆ ಕೂತು ಚರ್ಚೆ ಮಾಡಿ. ನೀವು ಒಮ್ಮತಕ್ಕೆ ಬಂದರೆ ನಮಗೂ ಒಪ್ಪಿಗೆ ಇದೆ ಎಂದು ಕೇಂದ್ರ ಸಚಿವರು ತಿಳಿಸಿದರು. ಈ ವಿಚಾರವಾಗಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಪ್ರತ್ಯೇಕವಾಗಿ ಕರೆ ಮಾಡಿ ಮಾರ್ಚ್ ಮೊದಲ ವಾರದಲ್ಲಿ ಚರ್ಚೆ ಮಾಡಲು ಸಮಯಾವಕಾಶ ನೀಡಿ ಎಂದು ಕೇಳಿದ್ದೇವೆ. ಈ ಯೋಜನೆಗೆ ನಮ್ಮ ತಾಂತ್ರಿಕ ಸಲಹಾ ಸಮಿತಿಯು ಪರ್ಯಾಯ ಮಾರ್ಗವನ್ನು ಸೂಚಿಸಿದ್ದು, ಇದನ್ನು ಉಭಯ ರಾಜ್ಯಗಳ ಜತೆ ಚರ್ಚೆ ಮಾಡದೇ ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

“ಈ ಹಿಂದೆ ಹೂಳೆತ್ತಲು ಅನೇಕ ಪ್ರಸ್ತಾವನೆಗಳು ಬಂದಿದ್ದವು. 24-30 ಟಿಎಂಸಿ ನೀರು ಸಂಗ್ರಹವಾಗುವಷ್ಟು ಹೂಳನ್ನು ಎತ್ತಿ ಎಲ್ಲಿ ಹಾಕಬೇಕು? ಇದಕ್ಕೆ ತಗಲುವ ವೆಚ್ಚ ಗಮನಿಸಿ ತಾಂತ್ರಿಕ ಸಮಿತಿ ಈ ಪ್ರಸ್ತಾವನೆ ನೀಡಿದೆ. ಆಂಧ್ರ ಪ್ರದೇಶ ಸಿಎಂ ಮಾರ್ಚ್ ಮೊದಲ ವಾರದಲ್ಲಿ ಸಭೆಗೆ ಕಾಲಾವಕಾಶ ನೀಡಲಿದ್ದು, ಅವರು ಸಮಯ ನಿಗದಿ ಮಾಡಿದ ಬಳಿಕ ನಾನು ಹಾಗೂ ಇಡೀ ತಂಡ ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿದ್ದೇವೆ” ಎಂದರು.

ಮಾ.18ಕ್ಕೆ ಮತ್ತೊಮ್ಮೆ ಜಲಶಕ್ತಿ ಸಚಿವರೊಂದಿಗೆ ಸಭೆ

ನದಿ ಜೋಡಣೆ ವಿಚಾರವಾಗಿ ಕೇಂದ್ರ ಸರ್ಕಾರದ ಮುಂದೆ ಅನೇಕ ಪ್ರಸ್ತಾಪಗಳಿದ್ದು, ನಾವು ನಮ್ಮ ಪಾಲಿನ ನೀರಿನ ಬಗ್ಗೆ ಪ್ರಸ್ತಾವನೆ ಮಾಡಿದ್ದೇವೆ. ಇದರ ಜತೆಗೆ ರಾಜ್ಯದ ಆಣೆಕಟ್ಟುಗಳ ಗೇಟ್ ಬದಲಾವಣೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ತಾಂತ್ರಿಕ ಸಮಿತಿ ನೇಮಿಸಲಾಗಿದೆ. ಇನ್ನು ಕಾಲುವೆಗಳ ನೀರು ಕೊನೆ ಭಾಗದವರೆಗೂ ತಲುಪಲು ಅಗತ್ಯ ಕ್ರಮ ಕೈಗೊಳ್ಳಲು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಯೋಜನೆ ರೂಪಿಸಲಾಗಿದೆ.

ಮಾರ್ಚ್ 18ರ ಒಳಗಾಗಿ ಮತ್ತೆ ಭೇಟಿ ಮಾಡಿ ಸಭೆ ನಡೆಸಲು ಕೇಂದ್ರ ಸಚಿವರ ಬಳಿ ಕಾಲಾವಕಾಶ ಪಡೆಯಲಾಗಿದೆ. ಜಲಶಕ್ತಿ ಇಲಾಖೆ ರಾಜ್ಯ ಸಚಿವರಾದ ಸೋಮಣ್ಣ ಅವರ ಅಭಿಪ್ರಾಯವನ್ನು ಪಡೆದು ನಾವು ಸಭೆ ಮಾಡಿದ್ದೇವೆ. ನಮ್ಮ ರಾಜ್ಯದ ಹಿತಕ್ಕೆ ಪರವಾಗಿ ಅವರು ಚರ್ಚೆ ಮಾಡಿದ್ದಾರೆ” ಎಂದರು.

ಕೃಷ್ಣಾ ಮೆಲ್ದಂಡೆ ಯೋಜನೆ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ಮನವಿ:

ಕೃಷ್ಣಾ ಮೇಲ್ದಂಡೆ ಯೋಜನೆ, ಆಲಮಟ್ಟಿ ಅಣೆಕಟ್ಟಿನ ವಿಚಾರವಾಗಿ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸುವುದು ಬಾಕಿ ಇದ್ದು, ಆದಷ್ಟು ಬೇಗ ಅಧಿಸೂಚನೆ ಹೊರಡಿಸಬೇಕು. ನಮ್ಮ ಪಾಲಿನ ನೀರನ್ನು ನಾವು ಬಳಸಿಕೊಳ್ಳಬೇಕು. ಇದಕ್ಕಾಗಿ ಅಗತ್ಯ ಅನುಮತಿ ನೀಡಬೇಕು. ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ನಾವು ಕಾಲುವೆ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿ ಆರಂಭಿಸಿದ್ದೇವೆ. ಭೂಸ್ವಾಧೀನ ಪ್ರಕ್ರಿಯೆಗೆ ಮುಖ್ಯಮಂತ್ರಿಗಳು ತೀರ್ಮಾನ ಮಾಡಿದ್ದಾರೆ. ಯೋಜನೆ ವೆಚ್ಚ ದಿನೇ ದಿನೆ ಏರಿಕೆಯಾಗುತ್ತದೆ ಎಂಬ ಕಾರಣಕ್ಕೆ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ಮುಗಿಸಲು ತೀರ್ಮಾನಿಸಿದ್ದೇವೆ” ಎಂದರು.

“ಕಳಸಾ ಬಂಡೂರಿ ಯೋಜನೆಗೆ ಅಗತ್ಯವಿರುವ ಅರಣ್ಯ ಇಲಾಖೆ ಅನುಮತಿ ಬಾಕಿ ಇದೆ. ಈ ಹಿಂದೆ ನಾನು ಹಾಗೂ ಮುಖ್ಯಮಂತ್ರಿಗಳು ಈ ಮಂಡಳಿಯ ನೇತೃತ್ವ ವಹಿಸಿರುವ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದೆವು. ಆಗ ಪ್ರಧಾನ ಮಂತ್ರಿಗಳು ಈ ವಿಚಾರವಾಗಿ ತೀರ್ಮಾನ ಮಾಡಲು ಜಲಶಕ್ತಿ ಸಚಿವರಿಗೆ ತಿಳಿಸಿರುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾವು ಕೇಂದ್ರ ಸಚಿವರ ಮೇಲೆ ಒತ್ತಡ ಹಾಕುತ್ತಿದ್ದೇವೆ. ಈ ಮಧ್ಯೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಜತೆಗೂ ಚರ್ಚೆ ಮಾಡಿದ್ದು, ಅವರು ಕೂಡ ಅರಣ್ಯ ಇಲಾಖೆ ಸಚಿವಾಲಯದ ಜತೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ” ಎಂದು ಮಾಹಿತಿ ನೀಡಿದರು.

ನಾರಾಯಣಪುರ ಅಣೆಕಟ್ಟಿನಿಂದ ತೆಲಂಗಾಣಕ್ಕೆ ರಾತ್ರೋರಾತ್ರಿ ನೀರು ಬಿಡಲಾಗಿದೆ ಬಗ್ಗೆ ಕೇಳಿದಾಗ, “ಇಲ್ಲಿ ಮುಚ್ಚುಮರೆ ಇಲ್ಲ. ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ನೆರೆ ರಾಜ್ಯಗಳ ಜತೆ ಪರಸ್ಪರ ಸಹಾಯ ಮಾಡಿಕೊಂಡು ಬರಲಾಗಿದೆ. ಅವರುಗಳು ಕೂಡ ಕೆಲವು ಸಂದರ್ಭದಲ್ಲಿ ನಮಗೆ ಸಹಾಯ ಮಾಡಿದ್ದು, 1 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗಿದೆ. ಇದು ಅನಧಿಕೃತವಾಗಿ ಬಿಟ್ಟಿರುವುದಲ್ಲ. ಆ ರಾಜ್ಯದ ಸಚಿವರು ಖುದ್ದಾಗಿ ಬಂದು ಮನವಿ ಮಾಡಿದ್ದರು, ನಾನು ಅನುಮತಿ ನೀಡಿ ನೀರು ಹರಿಸಲಾಗಿದೆ. ಅವರಿಗೆ ಸಹಾಯ ಮಾಡುವ ಪರಿಸ್ಥಿತಿ ಇದ್ದಾಗ, ನಮ್ಮ ಪರಿಸ್ಥಿತಿ ನೋಡಿಕೊಂಡು ಸಹಾಯ ಮಾಡಲಾಗಿದೆ, ನಮಗೆ ನೆರವಿನ ಅಗತ್ಯ ಇದ್ದಾಗ ಅವರು ಮಾಡಿದ್ದಾರೆ” ಎಂದು ಸ್ಪಷ್ಟಪಡಿಸಿದರು.

Post a Comment

Previous Post Next Post