ದೆವ್ವ ಬಿಡಿಸ್ತೀನಿ ಅಂತ ಅತ್ಯಾಚಾರ ಎಸಗಿದ ಧರ್ಮಗುರುಗೆ 10 ವರ್ಷ ಜೈಲು ಶಿಕ್ಷೆ

ದೆವ್ವ ಬಿಡಿಸುವ ನೆಪದಲ್ಲಿ ಅವಿವಾಹಿತ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಧರ್ಮಗುರುವಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಹುಣಸೂರು ಪಟ್ಟಣ ಲಾಲ್‌ ಬಂದ್ ಸ್ಟ್ರೀಟ್ ನಿವಾಸಿ ಜಬೀವುಲ್ಲಾ ಬಿನ್ ಅತಾವುಲ್ಲಾ (26) ಜೈಲುಶಿಕ್ಷೆಗೆ ಗುರಿಯಾಗಿದ್ದಾನೆ.

33 ವರ್ಷ ಆದರೂ ಮದುವೆಯಾಗದ ಹಿನ್ನೆಲೆಯಲ್ಲಿ ಆರೋಪಿ ಜಬೀವುಲ್ಲಾ ಬಿನ್ ಅತಾವುಲ್ಲಾ ಬಳಿ ಕುಟುಂಬಸ್ಥರು ಆಕೆಯನ್ನ ಕರೆದೊಯ್ದಿದ್ದರು. ಈ ಮಧ್ಯೆ ತಾನು ಧರ್ಮ ಗುರು ಎಂದು ಹೇಳಿಕೊಂಡಿದ್ದ ಆರೋಪಿ ಜಬೀವುಲ್ಲಾ ಸಂತ್ರಸ್ತೆಗೆ ದೆವ್ವ ಹಿಡಿದಿದೆ ಪೂಜೆ ಮಾಡಿ ದೆವ್ವ ಬಿಡಿಸಿದರೆ ಮದುವೆಯಾಗುತ್ತದೆ ಎಂದು ಹೇಳಿದ್ದ.

2020 ಜೂನ್ 1ರಂದು ಬೆಳಿಗ್ಗೆ 10 ಗಂಟೆಗೆ ಸಂತ್ರಸ್ತೆಯ ಮನೆಯಲ್ಲಿ ಪೂಜೆ ಮಾಡಿದ್ದು, ಮೊಟ್ಟೆ, ನಿಂಬೆಹಣ್ಣನ್ನು ಬೋಲೆಬಾಲೆ ಹಜರತ್ ಶಾ ಖಾದ್ರಿ ಅಂಬ್ರಿಗೋರಿಯ ಬಳಿ ಒಡೆಯಬೇಕೆಂದು ಹೇಳಿ ಪಿರಿಯಾಪಟ್ಟಣದ ಬೋಲೆಬಾಲೆ ಗೋರಿಯ ಬಳಿ ಸಂತ್ರಸ್ತೆ ಮತ್ತು ಆಕೆಯ ಸಂಬಂಧಿ ಸಾದಿಕ್ ಪಾಷ ಅವರನ್ನು ಕರೆದುಕೊಂಡು ಹೋಗಿದ್ದ.

ಆರೋಪಿಯು ಸಾದಿಕ್ ಪಾಷ  ಅವರಿಗೆ ಪಿರಿಯಾಪಟ್ಟಣ ಟೌನ್‌ ಗೆ ಹೋಗಿ ಬೆಂಕಿಪೊಟ್ಟಣ ತರುವಂತೆ ಕಳುಹಿಸಿ ಮಧ್ಯಾಹ್ನದ ಒಬ್ಬಳೇ ಇದ್ದಾಗ ಸಂತ್ರಸ್ತೆ ಮೇಲೆ ಅತ್ಯಾಚಾರವೆಸಗಿದ್ದಾನೆ.

ಅತ್ಯಾಚಾರ ಮಾಡಿದ ವಿಚಾರವನ್ನು ಮನೆಯವರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಆರೋಪಿ ವಿರುದ್ಧ ಪಿರಿಯಾಪಟ್ಟಣ ರ‍್ಕಲ್ ಇನ್ಸ್‌ಪೆಕ್ಟ‌ರ್  ಬಿ.ಆರ್.ಪ್ರದೀಪ್ ರವರು ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿದ್ದು,  ನ್ಯಾಯಾಧೀಶ  ಎಂ.ರಮೇಶ  10 ವರ್ಷಗಳ ಕಠಿಣ ಸಜೆ ಮತ್ತು 30 ಸಾವಿರ ರೂ. ದಂಡ ವಿಧಿಸಿದ್ದು, ಕಲಂ 506 ಐಪಿಸಿ ಅಡಿಯ ಅಪರಾಧಕ್ಕೆ 1 ವರ್ಷ ಸಾದಾ ಸಜೆ ಮತ್ತು ರೂ.5000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಕರಣದಲ್ಲಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ರ‍್ಕಾರಿ ಅಭಿಯೋಜಕ ಕೆ.ನಾಗರಾಜ ಸರ್ಕಾರದ ಪರ ವಾದ ಮಂಡಿಸಿದರು.

Post a Comment

Previous Post Next Post